Site icon Kannada News-suddikshana

ಮೈಸೂರು: ಪತಿಯಿಂದಲೇ ಕಾಂಗ್ರೆಸ್ ನಾಯಕಿಯ ಬರ್ಬರ ಹತ್ಯೆ!

ಮೈಸೂರು: ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರಿನಲ್ಲಿ ಕಾಂಗ್ರೆಸ್ ನಾಯಕಿಯೊಬ್ಬರನ್ನು ಪತಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಹತ್ಯೆಯಾದ ಕಾಂಗ್ರೆಸ್ ನಾಯಕಿಯನ್ನು ವಿದ್ಯಾ ಎಂದು ಗುರುತಿಸಲಾಗಿದ್ದು, ಇವರು ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಕೊಲೆಯಾಗಿದೆ ಎನ್ನಲಾಗಿದೆ.

ಮೈಸೂರಿನ ಶ್ರೀರಾಂಪುರ ನಿವಾಸಿಯಾಗಿರುವ ಆರೋಪಿ ನಂದೀಶ್‌, ಪತ್ನಿಯನ್ನು ಹತ್ಯೆಗೈದು ಪರಾರಿಯಾಗಿದ್ದಾನೆ. ನಿನ್ನೆ ತಡರಾತ್ರಿ ಬನ್ನೂರಿನ ತುರಗನೂರಿನಲ್ಲಿದ್ದ ಪತಿ ಮನೆಗೆ ವಿದ್ಯಾ ತೆರಳಿದ್ದಾರೆ. ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪತ್ನಿ ತಲೆಗೆ ನಂದೀಶ್ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವಿದ್ಯಾ ಅವರು ಕೆಲವು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಂಪತಿ ನಡುವೆ ಮನಸ್ತಾಪ ಉಂಟಾಗಿ ಆಗಾಗ ಜಗಳ ನಡೆಯುತ್ತಿತ್ತು.

ಇಲ್ಲಿನ ತುರಗನೂರಿನಲ್ಲಿ ವಿದ್ಯಾಳನ್ನು ಕೊಲೆ ಮಾಡಲಾಗಿದೆ. ಸೋಮವಾರ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ಸೀಮಾ ಲಾಟ್ಕರ್, ಎಎಸ್ಪಿ ನಂದಿನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯಗೈದ ಪತಿ ನಂದೀಶ್ ಸೆರೆಗೆ ಬನ್ನೂರು ಪೊಲೀಸರು ಬಲೆ ಬೀಸಿದ್ದಾರೆ.

Exit mobile version