ದಾವಣಗೆರೆ: ಕಾಂಗ್ರೆಸ್ ಪಕ್ಷಕ್ಕೆ ಸತತವಾಗಿ 45 ವರ್ಷಗಳಿಗೂ ಹೆಚ್ಚು ಕಾಲ ದುಡಿದಿದ್ದೇನೆ. ವಿದ್ಯಾರ್ಥಿ ಕಾಂಗ್ರೆಸ್ ನಿಂದ ಯುವ ಕಾಂಗ್ರೆಸ್ ನಂತರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ, ಎರಡು ಬಾರಿ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ನಿರ್ವಹಿಸುವವರೆಗೂ ನಾನು ಕಲ್ಲುಮುಳ್ಳುಗಳ ಹಾದಿಯನ್ನು ಸವೆಸಿದ್ದೇನೆ. ಪಕ್ಷ ಸಂಘಟನೆಗೆ ನಮ್ಮ ಅಮೂಲ್ಯ ಸೇವೆಯನ್ನು ಒದಗಿಸಿದ್ದೇನೆ. ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ತಳಮಟ್ಟದಿಂದ ಶ್ರಮಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ತಿಳಿಸಿದ್ದಾರೆ.
ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪ್ರತಿಕ್ರಿಯಿಸಿರುವ ಅವರು. ಈ ಉಪಚುನಾವಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಗಬೇಕು ಎಂಬ ಸದಾಶಯದಿಂದ ಪಕ್ಷದ ಅಲ್ಪಸಂಖ್ಯಾತ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದೇನೆ ಎಂದಿದ್ದಾರೆ.
ಇಲ್ಲಿಯವರೆಗೂ ಯಾವುದೇ ಭ್ರಷ್ಟಾಚಾರವೆಸಗದೇ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷದ ಮೇಲೆ ಅತೀವ ಗೌರವವಿಟ್ಟಿರುವ ನನ್ನ ಪ್ರಾಮಾಣಿಕತೆಯ ಕುರಿತು ಪತ್ರಿಕಾಗೋಷ್ಠಿ ನಡೆಸಿ, ಕೆಲವೊಂದು ಅಲ್ಪಸಂಖ್ಯಾತ ಮುಖಂಡರು, ಪ್ರಶ್ನೆಯೆಬ್ಬಿಸಿರುವುದು
ನನಗೆ ಅತೀವ ನೋವು ತಂದ ವಿಷಯ ಎಂದು ತಿಳಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಎರಡೆರಡು ಬಾರಿ ಅವಮಾನಿಸಿದ್ದು, ಹಾಗೂ ಏಕವಚನದಲ್ಲಿ ಸಂಭೋಧಿಸಿದ್ದನ್ನು ಪಕ್ಷದ ಉನ್ನತರು ಚಿಕ್ಕ ವಿಷಯವೆಂಬಂತೆ ನಿರ್ಲಕ್ಷಿಸಿದ್ದು ನನಗೆ ನೋವು ತಂದಿದೆ. ಇದು ಕೇವಲ ನನ್ನ ನೋವಲ್ಲ, ಇಡೀ ರಾಜ್ಯದ ಅಲ್ಪಸಂಖ್ಯಾತರಿಗಾದ ನೋವು. ಪಕ್ಷದ ತತ್ವ, ಆದರ್ಶಗಳಿಗೆ ಅನುಗುಣವಾಗಿ ದುಡಿದ ನನ್ನನ್ನು ಅನುಮಾನಿಸಿ ಅವಮಾನಿಸಿದ್ದು ನನಗೆ ಸಹಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನೆಂಬ ಹುದ್ದೆಯನ್ನು
ನಿರ್ಲಕ್ಷ್ಯ ಮಾಡಿ ಉಪಚುನಾವಣೆಯ ಪ್ರಚಾರ ಕಾರ್ಯದಿಂದಲೂ ನನ್ನನ್ನು ದೂರವಿಟ್ಟದ್ದು ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತ ಘಟಕಕ್ಕೆ ಮಾಡಿದ ಅವಮಾನವಾಗಿದೆ. ಇವೆಲ್ಲಾ ಕಾರಣಗಳನ್ನು ಮುಂದಿಟ್ಟು, ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ
ಎಂದು ಸ್ಪಷ್ಟನೆ ನೀಡಿದ್ದಾರೆ.
ಪಕ್ಷ ಕಟ್ಟಲು ದುಡಿದ ನಮ್ಮಂತಹ ಕಾರ್ಯಕರ್ತರನ್ನು ಬದಿಗೆ ಸರಿಸಲು ಕೆಲ ಮುಖಂಡರು ಪ್ರಯತ್ನಿಸುತ್ತಿರುವುದು ಉತ್ತಮ ಲಕ್ಷಣವಲ್ಲ. ಇಂತಹ ಬೆಳವಣಿಗೆಗಳು ಸಹಜ ಆತಂಕವನ್ನು ಉಂಟುಮಾಡುತ್ತಿವೆ. ನನ್ನ ರಾಜೀನಾಮೆಯು ನನ್ನ ಸ್ವ ಇಚ್ಛೆಯ ನಿರ್ಧಾರವಾಗಿದ್ದು, ಪಕ್ಷದ ಯಾರದೇ ಒತ್ತಡದಿಂದ ನೀಡುತ್ತಿರುವುದಲ್ಲ ಎಂದು ತಿಳಿಸಿದ್ದಾರೆ.
- Abdul Jabbar Resignation
- By-election 2026
- Congress Internal Issues.
- Davanagere Congress News
- Karnataka Congress Minority Cell
- Karnataka Politics
- Minority Leaders Discontent
- MLC Abdul Jabbar
- Zameer Ahmed Khan
- ಅಬ್ದುಲ್ ಜಬ್ಬಾರ್ ರಾಜೀನಾಮೆ
- ಅಲ್ಪಸಂಖ್ಯಾತ ಅಭ್ಯರ್ಥಿ ಟಿಕೆಟ್.
- ಉಪಚುನಾವಣೆ 2026
- ಕರ್ನಾಟಕ ರಾಜಕೀಯ ಸುದ್ದಿ
- ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ
- ದಾವಣಗೆರೆ ಜಿಲ್ಲಾ ಕಾಂಗ್ರೆಸ್
- ಪಕ್ಷ ಸಂಘಟನೆ
- ವಿಧಾನ ಪರಿಷತ್ ಸದಸ್ಯ
- ಸಚಿವ ಜಮೀರ್ ಅಹ್ಮದ್ ಖಾನ್





Leave a comment