Site icon Kannada News-suddikshana

ರಸ್ತೆ ದುರಸ್ತಿಗೊಳಿಸಿದ ತಿಂಗಳು ಕಳೆಯುವುದರೊಳಗೆ ಕಿತ್ತು ಹೋಗಬಾರದು: ಶಾಸಕ ಕೆ. ಎಸ್. ಬಸವಂತಪ್ಪ ಸೂಚನೆ!

SUDDIKSHANA KANNADA NEWS/ DAVANAGERE/ DATE:24-02-2025

ದಾವಣಗೆರೆ: ದುರಸ್ತಿ ಮಾಡಿ ತಿಂಗಳು ಕಳೆಯುವುದರೊಳಗೆ ಕಿತ್ತು ಹೋಗಬಾರದು. ತಾತ್ಕಾಲಿಕ ದುರಸ್ತಿ ಮಾಡಿದರೂ ದೀರ್ಘ ಕಾಲ ಬಾಳಿಕೆ ಬರುವಂತಿರಬೇಕೆಂದು ಗುತ್ತಿಗೆದಾರನಿಗೆ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು ಮಾಡಿದರು.

ತಾಲೂಕಿನ ಗುಡಾಳು-ಹಾಲುವರ್ತಿ-ಕೆಂಚಮ್ಮನಹಳ್ಳಿ ಮಾರ್ಗದ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗೆ ತಾತ್ಕಾಲಿಕ ಡಾಂಬರೀಕರಣ ದುರಸ್ತಿ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ನಡೆಯುತ್ತಿದ್ದ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸಿದರು.

ಗುಡಾಳು-ಕೆಂಚಮ್ಮನಹಳ್ಳಿ ಗ್ರಾಮಗಳ ಸಂಪರ್ಕ ಮಾಡುವ ರಸ್ತೆಯ ಮಧ್ಯೆ ಕೆಲವೆಡೆ ಗುಂಡಿಗಳು ಬಿದ್ದು ಹದಗೆಟ್ಟಿತ್ತು. ತಾತ್ಕಾಲಿಕ ರಸ್ತೆ ದುರಸ್ತಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಖುದ್ದು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿದರು.

ತಾತ್ಕಾಲಿಕ ರಸ್ತೆ ದುರಸ್ತಿ ಕಾಮಗಾರಿಯೂ ನೂರಾರು ವಾಹನಗಳು ಓಡಾಡಿದ ಮೇಲೆ ಕಿತ್ತು ಹೋಗಿರುತ್ತದೆ. ಇದು ಆಗಬಾರದು. ಶಾಶ್ವತ ಕಾಮಗಾರಿ ಕೈಗೊಳ್ಳುವವರೆಗೆ ದುರಸ್ತಿ ಮಾಡಿದ ಕಾಮಗಾರಿಯು ಸುಸ್ಥಿತಿಯಲ್ಲಿರಬೇಕು. ಪದೇ ಪದೇ
ದುರಸ್ತಿ ಮಾಡುವಂತಿರಬಾರದು. ಪದೇ ಪದೇ ಕಾಮಗಾರಿ ನಡೆಸುವುದರಿಂದ ಸರ್ಕಾರದ ಹಣ ಪೋಲಾಗುತ್ತದೆ. ಅದನ್ನು ತಡೆಯುವ ಕೆಲಸ ಆಗಬೇಕೆಂದು ಗುತ್ತಿಗೆದಾರನಿಗೆ ಸೂಚನೆ ನೀಡಿದರು.

ರಸ್ತೆಗೆ ನೆಪಕ್ಕೆ ಒಂದಿಷ್ಟು ಜಲ್ಲಿ ಚೆಲ್ಲಿ ಡಾಂಬರು ಹರಡಿ ದುರಸ್ತಿ ಮಾಡಬೇಡಿ. ಕೆಲವೆಡೆ ತಾತ್ಕಾಲಿಕ ರಸ್ತೆ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಡಾಂಬರು ರಸ್ತೆಯನ್ನು ಉಜ್ಜಿದರೆ ಡಾಂಬರು ಪುಡಿ, ಮಣ್ಣು ಬರುತ್ತಿದೆ. ಸಣ್ಣ ವಾಹನ ಓಡಾಡಿದರೂ ರಸ್ತೆ ಗುಂಡಿ ಬೀಳುವಂತಾಗಿರುತ್ತದೆ. ಹೀಗಾಗಿ ತಾತ್ಕಾಲಿಕ ರಸ್ತಿ ದುರಸ್ತಿ ಕಾಮಗಾರಿಯೂ ಶಾಶ್ವತವಾಗಿ ಉಳಿಯುವಂತ ಕೆಲಸ ಆಗಬೇಕೆಂದರು.

Exit mobile version