Site icon Kannada News-suddikshana

ಮಿಸೆಸ್ ಇಂಡಿಯಾ ನ್ಯಾಷನಲ್ ಬ್ಯೂಟಿ ಸ್ಪರ್ಧೆ; ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡ ಕಡಬದ ಕುವರಿ

ಮಂಗಳೂರು: ಮಿಸೆಸ್ ಇಂಡಿಯಾ ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ಕಡಬದ ಕುವರಿ ಅಂತಿಮ ಹಣಾಹಣಿಯಲ್ಲಿ ಮೊದಲ ರನ್ನರ್-ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಕಡಬ ತಾ| ಎಡಮಂಗಲದ ಮರ್ದೂರು ಮನೆಯ ಮೋಹನ್ ಎಂ. ಹಾಗೂ ಗುಣಾವತಿ ಕೆ.ಕೆ.ದಂಪತಿಯ ಪುತ್ರಿ ಸುಪ್ರಿಯಾ ಮೋಹನ್‌ ಅವರು ಅಂತಿಮ ಮೊದಲ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಪುಣೆಯ ಹಯಾತ್ ರೀಜೆನ್ಸಿಯಲ್ಲಿ ಮೇ.26ರಂದು ನಡೆದ 2024ನೇ ಸಾಲಿನ ಮಿಸೆಸ್ ಇಂಡಿಯಾ ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ವಿವಿಧ ಆಕರ್ಷಣೆಗಳನ್ನು ಹೊಂದಿತ್ತು. ಈ ಸ್ಪರ್ಧೆಯ ಫೈನಲ್‌ನಲ್ಲಿ 14 ಸ್ಪರ್ಧಿಗಳು ಭಾಗವಹಿಸಿದ್ದರು. ಆಡಿಷ್‌ನ್‌ನಲ್ಲಿ ಭಾಗವಹಿಸಿದ್ದ ನೂರಾರು ಗೃಹಿಣಿಯರಲ್ಲಿ ಅಂತಿಮವಾಗಿ 14 ಜನರನ್ನು ಮಾತ್ರ ಫೈನಲ್‌ಗೆ ಆಯ್ಕೆ ಮಾಡಲಾಗಿತ್ತು. ಮೇ 22 ರಿಂದ 25 ರ ತನಕ ನಡೆದ ಫೈನಲ್ ಇವೆಂಟ್ ಮೂರು ಸುತ್ತುಗಳನ್ನು ಒಳಗೊಂಡಿತ್ತು.

ಸಾಂಸ್ಕೃತಿಕ, ವ್ಯಕ್ತಿಯಾಧಾರಿತ, ವಿಷಯಾಧಾರಿತ, ಸಂದೇಶ ಆಧಾರಿತ ಉಡುಪು ಹೀಗೆ ಸ್ಪರ್ಧಿಗಳ ಆಯ್ಕೆಯ ಅನುಸಾರ ಮೊದಲ ಸುತ್ತನ್ನು ರೂಪಿಸಿತ್ತು. ಈ ಮೂರು ಸುತ್ತುಗಳಲ್ಲಿಯೂ ಅತ್ಯುತ್ತಮ ಪ್ರತಿಭೆ ತೋರಿದ ಸ್ಪರ್ಧಿಗೆ ವೈಯಕ್ತಿಕ ಟೈಟಲ್ ನೀಡಲಾಯಿತು. ಇದರಲ್ಲಿ ಇವರಿಗೆ ಮಿಸೆಸ್ ಇಂಡಿಯಾ ನ್ಯಾಷನಲ್ ಬ್ಯೂಟಿ ಮೊದಲ ರನ್ನರ್-ಅಪ್ ಕಿರೀಟ ದೊರೆಯಿತು. ಇದರೊಂದಿಗೆ ಬೆಸ್ಟ್ ಕ್ಯಾಟ್ ವಾಕರ್ ವಿನ್ನರ್ ಪ್ರಶಸ್ತಿ ಪಡೆದುಕೊಂಡರು. ಸುಪ್ರಿಯಾ ಮೋಹನ್‌ರವರು ವೃತ್ತಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್ ಆಗಿದ್ದು, ಯುಎಸ್​ನ ಐಟಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಮಡಿಕೇರಿ ತಾಲೂಕು ಪಾನತ್ತಲೆ ಮನೆಯ ಅರ್ಜುನ್ ಪಿ.ಜೆ ಯವರನ್ನು ವಿವಾಹವಾಗಿದ್ದು, 5 ವರ್ಷದ ಮಗನಿದ್ದಾನೆ. ಇದರೊಂದಿಗೆ ಇವರು ಪ್ರೊಫೆಷನಲ್ ಬ್ರೈಡಲ್ ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಾರೆ. ಮದುವೆಯಾದ ಮಹಿಳೆಯರಲ್ಲಿನ ಪ್ರತಿಭೆಗೆ ಅತ್ಯುತ್ತಮ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದ್ದು, ಇದೀಗ ಐದು ವರ್ಷದ ಮಗುವಿನ ತಾಯಿಯೂ ಆಗಿರುವ ಸುಪ್ರಿಯಾ ಅವರು ಮಿಸಸ್ ಇಂಡಿಯಾ ನ್ಯಾಷನಲ್ ಬ್ಯೂಟಿ ಪ್ರಶಸ್ತಿ ರನ್ನರ್​ ಆಪ್​ ಆಗಿ ಸಾಧನೆ ಮಾಡಿದ್ದಾರೆ. Ad

Exit mobile version