Site icon Kannada News-suddikshana

ರಾಜಕಾಲುವೆ ಬಳಿ ತ್ಯಾಜ್ಯ, ಹೂಳು ತೆಗೆಯುವ ಕಾರ್ಯ ಚುರುಕು: ಮೇಯರ್ ನೇತೃತ್ವದ ತಂಡ ಭೇಟಿ, ಪರಿಶೀಲನೆ

SUDDIKSHANA KANNADA NEWS/ DAVANAGERE/ DATE:25-05-2023

 

ದಾವಣಗೆರೆ (DAVANAGERE): ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ (SHAMANURU SHIVASHANKARAPPA) ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಅವರ ಆದೇಶದ ಮೇರೆಗೆ ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್ ನೇತೃತ್ವದ ತಂಡ ರಾಜಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಹೊಸ ಬಸ್ ನಿಲ್ದಾಣ, ಭಾರತ್ ಕಾಲೋನಿ ಹಾಗೂ ಬಸಾಪುರ ಗ್ರಾಮದಲ್ಲಿನ ರಾಜಕಾಲುವೆಗಳಲ್ಲಿ ತ್ಯಾಜ್ಯ ಹಾಗೂ ಹೂಳು ತೆಗೆಯುವ ಕೆಲಸ ನಡೆಯುತ್ತಿದ್ದು, ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಗಡಿಗುಡಾಳ್ ಮಂಜುನಾಥ್, ಆಯುಕ್ತರಾದ ರೇಣುಕಾ, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಕೆ. ಚಮನ್ ಸಾಬ್, ಜಗದೀಶ್, ಇಇ ಮನೋಹರ್ ಹಾಗೂ ಎಇಇ ಶೃತಿ ಅವರು ಸಹ ಭೇಟಿ ನೀಡಿ ಕೆಲಸ ವೀಕ್ಷಿಸಿದರು.

ಮಳೆ ಸುರಿಯಲು ಶುರುವಾದರೆ ಕೆಲ ಮನೆಗಳಿಗೆ ನೀರು ನುಗ್ಗುತ್ತದೆ. ತ್ಯಾಜ್ಯ ಹಾಗೂ ಹೂಳು ಸಂಗ್ರಹವಾಗಿರುವುದರಿಂದ ವಾತಾವರಣವೂ ಮಲಿನವಾಗುತ್ತದೆ. ಈ ಕಾರಣಕ್ಕಾಗಿ ಸ್ವಚ್ಛಗೊಳಿಸುವ ಕಾರ್ಯವನ್ನು ವೇಗವಾಗಿ ನಡೆಸಿ ಪೂರ್ಣಗೊಳಿಸುವಂತೆ ಮೇಯರ್ ವಿನಾಯಕ್ ಪೈಲ್ವಾನ್, ಆಯುಕ್ತರಾದ ರೇಣುಕಾ ಸೂಚಿಸಿದರು.

ಜನರಿಗೆ ತೊಂದರೆಯಾಗಬಾರದು, ಸಾರ್ವಜನಿಕರು, ರಾಜಕಾಲುವೆ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗದಂತೆ ತಡೆಯುವ ಹಿತದೃಷ್ಟಿ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಗಡಿಗುಡಾಳ್ ಮಂಜುನಾಥ್ ಹೇಳಿದರು.

ಈಗಾಗಲೇ ಹೂಳು, ತ್ಯಾಜ್ಯ ತೆಗೆಯುವ ಕೆಲಸ ನಡೆಯುತ್ತಿದೆ. ಅಪಾಯಕಾರಿ ರಾಜಕಾಲುವೆಗಳನ್ನು ಗುರುತು ಮಾಡಲಾಗಿದೆ. ಆದ್ಯತೆ ಮೇರೆಗೆ ಎಲ್ಲೆಲ್ಲಿ ಗಂಭೀರ ಸಮಸ್ಯೆಯಿದೆಯೋ ಅಲ್ಲಿ ಕಸ, ಕಡ್ಡಿ ತೆರವುಗೊಳಿಸುವ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಆದಷ್ಟು ಬೇಗ ಕೆಲಸ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ಇದೆ. ಅಧಿಕಾರಿಗಳೂ ಸಹ ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿದ್ದು, ಆಯುಕ್ತರು, ಮೇಯರ್ ಸ್ಥಳಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

Exit mobile version