Site icon Kannada News-suddikshana

8 ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ಟಿಕೆಟ್ ಕೊಡಿ, ಇಲ್ಲದಿದ್ದರೆ ಬಂಡಾಯ ಎದುರಿಸಿ: ಬಂಡೆದ್ದಿರುವ ನಾಯಕರ ಶಪಥ

SUDDIKSHANA KANNADA NEWS/ DAVANAGERE/ DATE:18-04-2023

 

ದಾವಣಗೆರೆ (DAVANAGERE): ಮಾಯಕೊಂಡ (MAYAKONDA)ಕ್ಷೇತ್ರದಲ್ಲಿ ಈಗ ನೀಡಿರುವ ಬಿಜೆಪಿ (BJP) ಅಭ್ಯರ್ಥಿ ಬಸವರಾಜ್ ನಾಯ್ಕ್ ಬೆಂಬಲಿಸುವ ಪ್ರಶ್ನೆಯೇ ಇಲ್ಲ. 8 ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ಸಿ ಫಾರಂ (C FORM)ನೀಡಬೇಕು. ಇಲ್ಲದಿದ್ದರೆ ಬಂಡಾಯವಾಗಿ ಸ್ಪರ್ಧೆ ಮಾಡುವುದು ಶತಃಸಿದ್ಧ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ
ಎಂದು ಮಾಯಕೊಂಡ ಬಿಜೆಪಿ ಆಕಾಂಕ್ಷಿಗಳು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಂಜಾನಾಯ್ಕ ಸೇರಿದಂತೆ ಎಂಟು ಆಕಾಂಕ್ಷಿಗಳು, ಏಪ್ರಿಲ್ 19ರಂದು ನಮ್ಮ ಬಂಡಾಯ ಅಭ್ಯರ್ಥಿ ಶಿವಪ್ರಕಾಶ್ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಗಾಂಧಿ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿ ಉಮೇದುವಾರಿಕೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಈಗಾಗಲೇ ನಮ್ಮ ಜೊತೆ ಸಂಸದ ಜಿ. ಎಂ. ಸಿದ್ದೇಶ್ವರ (SIDDESHWARA) ಮಾತನಾಡಿದ್ದಾರೆ. ನಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದೇವೆ. ಮಾಯಕೊಂಡ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ವಿಚಾರದಲ್ಲಿ ನಮ್ಮ ನಿಲುವು ಯಾವುದೇ ಕಾರಣಕ್ಕೂ ಬದಲಾಗದು. ಹೆದರಿಸುವ, ಹಿಂಸೆ ನೀಡುವ ಕೆಲಸ ಮಾಡಲಾಗುತ್ತಿದೆ. ಸಂಬಂಧಿಕರು, ಸಮಾಜದ ಅಧಿಕಾರಿಗಳ ಮೂಲಕ ಒತ್ತಡ ಹೇರುವ ತಂತ್ರ ಮಾಡಲಾಗುತ್ತಿದೆ. ಇದಕ್ಕೆ ಜಗ್ಗುವುದೂ ಇಲ್ಲ, ಬಗ್ಗುವುದೂ ಇಲ್ಲ ಎಂದು ತಿಳಿಸಿದರು.

ಎಂಟು ಆಕಾಂಕ್ಷಿಗಳಿದ್ದರೂ ಪಕ್ಷಕ್ಕಾಗಿ ದುಡಿಯದ ವ್ಯಕ್ತಿಗೆ ಟಿಕೆಟ್ (TICEKT) ಕೊಡಲಾಗಿದೆ. ಸ್ಥಳೀಯ ವರಿಷ್ಠರು ಮಾಡಿರುವ ತಪ್ಪು ಇದು. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಿಲ್ಲ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಸ್ಪರ್ಧಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮತ್ತೊಮ್ಮೆ ಮಾತುಕತೆಗೆ ಕರೆದರೆ ಹೋಗುತ್ತೇವೆ. ರಾಜ್ಯ ಮತ್ತು ರಾಷ್ಟ್ರ ನಾಯಕರ ಮೇಲೆ ನಮಗೆ ಭರವಸೆ ಇದೆ. ಇಷ್ಟೊಂದು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನವೊಲಿಸಲು ಯತ್ನಿಸಲಾಗುತ್ತಿದೆ. ಪಕ್ಷಕ್ಕಾಗಿ 30 ರಿಂದ 40 ವರ್ಷ ನಾವೆಲ್ಲರೂ ದುಡಿದಿದ್ದೇವೆ. ದುಡಿಯುತ್ತಲೇ ಇದ್ದೇವೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿಲ್ಲ. ನಮ್ಮದು ವ್ಯಕ್ತಿ ವಿರೋಧ ಅಷ್ಟೇ ಎಂದು ಹೇಳಿದರು.

ಸಿದ್ದೇಶ್ವರ್ ಅವರು ಬಂಡಾಯ ಶಮನ ಆಗುತ್ತೆ ಎಂದಿದ್ದಾರೆ. ಆದ್ರೆ, ಅಭ್ಯರ್ಥಿ ಬದಲಾದರೆ ಮಾತ್ರ. ಮಾಯಕೊಂಡ ಕ್ಷೇತ್ರವು ಬಿಜೆಪಿ ಭದ್ರಕೋಟೆ. ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಗೆಲ್ಲಿಸಿ ಮತ್ತೆ ಬಿಜೆಪಿಗೆ ಕರೆತರುವುದಾಗಿ ಸಿದ್ದೇಶ್ವರ್ ಅವರಿಗೆ ತಿಳಿಸಿದ್ದೇವೆ. ಇನ್ನು ಎರಡ್ಮೂರು ದಿನಗಳಿವೆ. ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರ ಮೇಲೆ ನಮ್ಮ ನಿರ್ಧಾರವೂ ನಿಂತಿದೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಆಲೂರು ನಿಂಗರಾಜ್, ಬಿಜೆಪಿ ಎಸ್ಪಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್. ಹನುಮಂತನಾಯ್ಕ, ರಮೇಶ್ ನಾಯ್ಕ ಮತ್ತಿತರರು ಹಾಜರಿದ್ದರು.

Exit mobile version