Site icon Kannada News-suddikshana

ಶಿರಾಡಿ ಘಾಟ್‌ನಲ್ಲಿ ಕಂಟೈನರ್ ಲಾರಿ,ಕಾರು ಡಿಕ್ಕಿ – ತಾಯಿ, ಮಗ ಸಾವು

ಮಂಗಳೂರು: ಇನ್ನೋವರ್ ಕಾರು ಮತ್ತು ಕಂಟೈನರ್ ಲಾರಿ ನಡುವೆ ಭೀಕರ ಢಿಕ್ಕಿ ಸಂಭವಿಸಿದ ಪರಿಣಾಮ ತಾಯಿ ಮತ್ತು ಮಗ ಸಾವನ್ನಪ್ಪಿದ್ದು, ಇತರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಾಡಿ ಘಾಟ್‌ನಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.

ಮೃತರನ್ನು ಪಾಣೆಮಂಗಳೂರು ಬೊಂಡಾಲ ​​ನಿವಾಸಿ ಶಬ್ಬೀರ್ ಎಂಬವರ ಪುತ್ರ ಮಹಮ್ಮದ್ ಶಫೀಕ್ (20) ಹಾಗೂ ಶಬ್ಬೀರ್ ಪತ್ನಿ ಸಫಿಯಾ (50) ಎಂದು ಗುರುತಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಕಾರು ಶಿರಾಡಿ ಘಾಟ್‌ನ ಕೆಂಪುಹೊಳೆ ಬಳಿ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕಂಟೈನರ್‌ ಲಾರಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಕಾರಿನಲ್ಲಿದ್ದ ಪ್ರಯಾಣಿಕರಲ್ಲಿ ಮೂವರು ಮಕ್ಕಳಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಸಂಬಂಧಿಕರೊಬ್ಬರ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕುಟುಂಬ ವಾಪಸ್ಸಾಗುತ್ತಿತ್ತು. ಮೃತರ ಕುಟುಂಬದ ಸದಸ್ಯರು, ಮೇ 20 ರಂದು ಬೆಂಗಳೂರಿನಲ್ಲಿ ಮದುವೆಯ ಆರತಕ್ಷತೆ ಇತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದವರು ಸಹ ಅದೇ ಸಮಯದಲ್ಲಿ ಭಾಗವಹಿಸಿದ್ದರು. ಮಧ್ಯರಾತ್ರಿ ಬೆಂಗಳೂರಿನಿಂದ ಹೊರಟು ಮಂಗಳೂರಿಗೆ ಮರಳಿದರು. ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ.

ಮೃತ ಶಫೀಕ್ ಕಾರು ಚಲಾಯಿಸುತ್ತಿದ್ದ. ಈತ ಕೊಣಾಜೆಯ ಪಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದ ಎಂದು ತಿಳಿದು ಬಂದಿದೆ. ತಾಯಿ ಮತ್ತು ಮಗನ ಪಾರ್ಥಿವ ಶರೀರವನ್ನು ಮಂಗಳೂರಿನ ಫ್ರಾ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇತರ ಗಾಯಾಳುಗಳು ನಗರದ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Exit mobile version