ಧಾರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಧಾರ್ ಜಿಲ್ಲೆಯ ಗೊಂಡಿಖೇಡ ಗ್ರಾಮದಲ್ಲಿ ನಡೆದ ದರೋಡೆ ಮತ್ತು ಕೊಲೆ ಪ್ರಕರಣವೊಂದು ಈಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಮನೆಯೊಳಗೆ ನುಗ್ಗಿದ ದರೋಡೆಕೋರರು ಪತಿಯನ್ನು ಕೊಂದಿದ್ದಾರೆ ಎಂದು ನಾಟಕವಾಡಿದ್ದ ಪತ್ನಿಯೇ ತನ್ನ ಪ್ರಿಯತಮನೊಂದಿಗೆ ಸೇರಿ ಈ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಪ್ರಕರಣದ ಹಿನ್ನೆಲೆ:
ಆರಂಭದಲ್ಲಿ ಪತ್ನಿ ಪ್ರಿಯಾಂಕಾ, ಅಪರಿಚಿತರು ಮನೆಗೆ ನುಗ್ಗಿ ತನ್ನ ಮೇಲೆ ಹಲ್ಲೆ ನಡೆಸಿ ಪತಿ ದೇವಕೃಷ್ಣ ಅವರನ್ನು ಕೊಂದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಕೇವಲ 36 ಗಂಟೆಗಳಲ್ಲಿ ಈ ಸುಳ್ಳನ್ನು ಬಯಲಿಗೆಳೆದಿದ್ದಾರೆ.
ಬಣ್ಣದ ಬಗ್ಗೆ ನಿಂದನೆ:
ದೇವಕೃಷ್ಣ ಅವರ ಕುಟುಂಬದವರ ಪ್ರಕಾರ, ಪ್ರಿಯಾಂಕಾ ತನ್ನ ಪತಿಯ ಚರ್ಮದ ಬಣ್ಣದ ಬಗ್ಗೆ ಸದಾ ಕಾಲ ಹೀಯಾಳಿಸುತ್ತಿದ್ದಳು. “ನೀನು ಕಪ್ಪಗಿದ್ದೀಯಾ (Tum kaale ho), ನನಗೆ ನಿನಗಿಂತ ಉತ್ತಮವಾದ ವ್ಯಕ್ತಿ ಸಿಗಬೇಕು” ಎಂದು ಆಗಾಗ ಜಗಳವಾಡುತ್ತಿದ್ದಳು ಹಾಗೂ ವಿಚ್ಛೇದನಕ್ಕಾಗಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ.
ಸಂಚು ಮತ್ತು ಕೊಲೆ:
ಪ್ರಿಯಾಂಕಾ ತನ್ನ ಪ್ರಿಯತಮ ಕಮಲೇಶ್ ಜೊತೆ ಸೇರಿ ಪತಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಳು. ಇದಕ್ಕಾಗಿ ಸುರೇಂದ್ರ ಎಂಬಾತನಿಗೆ 1 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ದೇವಕೃಷ್ಣ ನಿದ್ರೆಯಲ್ಲಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ನಂತರ ದರೋಡೆ ನಡೆದಂತೆ ಬಿಂಬಿಸಲು ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಪ್ರಿಯಾಂಕಾ ತಾನೇ ಕೈಕಾಲು ಕಟ್ಟಿಸಿಕೊಂಡು ನಾಟಕವಾಡಿದ್ದಳು. ಪ್ರಸ್ತುತ ಪ್ರಿಯಾಂಕಾ ಮತ್ತು ಕಮಲೇಶ್ ಇಬ್ಬರನ್ನೂ ಬಂಧಿಸಲಾಗಿದೆ.





Leave a comment