ಲಕ್ನೋ: ಉದ್ಯಮಿ ಶಿವ ಶರ್ಮಾ ಸಾವು ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿರುವ ಇನ್ಫ್ಲುಯೆನ್ಸರ್ ಶ್ರದ್ಧಾ ದುಬೆ ಕೊನೆಗೂ ಮೌನ ಮುರಿದಿದ್ದಾರೆ. ತಾವು ಯಾವುದೇ ಕೊಲೆ ಮಾಡಿಲ್ಲ ಹಾಗೂ ಶಿವ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವೀಡಿಯೋ ಸಂದೇಶದ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ. ಆದರೆ, ಶ್ರದ್ಧಾ ಅವರ ಎಸ್ಯುವಿ ವಾಹನವು ಭಾರತ-ನೇಪಾಳ ಗಡಿ ಪ್ರದೇಶದಲ್ಲಿ ಪತ್ತೆಯಾಗಿದ್ದು, ಅವರು ವಿದೇಶಕ್ಕೆ ಪರಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅಕ್ಟೋಬರ್ 9 ರಂದು ಲಕ್ನೋದಲ್ಲಿರುವ ಶ್ರದ್ಧಾ ದುಬೆ ಅವರ ಅಪಾರ್ಟ್ಮೆಂಟ್ನ 4 ನೇ ಮಹಡಿಯಿಂದ ಬಿದ್ದು ಶಿವ ಶರ್ಮಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಘಟನೆಯ ನಂತರ ಶ್ರದ್ಧಾ ತಲೆಮರೆಸಿಕೊಂಡಿದ್ದು, ಪೊಲೀಸರು ಶ್ರದ್ಧಾ, ಆಕೆಯ ಸಹೋದರಿ, ಚಾಲಕ ಸೇರಿದಂತೆ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ‘ಸಚಿವಾಲಯ’ದ ಲೇಬಲ್ ಹೊಂದಿದ್ದ ಬಿಳಿ ಆಡಿ ಕಾರೊಂದು ಕಟ್ಟಡದ ಬಳಿ ಬಂದಿರುವ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಅಪಾರ್ಟ್ಮೆಂಟ್ನಲ್ಲಿ ಸಿಕ್ಕ ಸಾಕ್ಷ್ಯಗಳು ತನಿಖೆಗೆ ಹೊಸ ತಿರುವು ನೀಡಿವೆ.
ವಿಡಿಯೋ ಸಂದೇಶ ಮತ್ತು ಸತ್ಯಾಸತ್ಯತೆ: ತಾನು ಎಲ್ಲೂ ನಾಪತ್ತೆಯಾಗಿಲ್ಲ, ಶೀಘ್ರದಲ್ಲೇ ಪೊಲೀಸರ ಮುಂದೆ ಹೇಳಿಕೆ ನೀಡಿ ಸತ್ಯವನ್ನು ಹೊರಹಾಕುವುದಾಗಿ ಶ್ರದ್ಧಾ ದುಬೆ ಹೇಳಿದ್ದಾರೆ. ಅಲ್ಲದೆ, ಗ್ಯಾಂಗ್ಸ್ಟರ್ಗಳು ಅಥವಾ ರಾಜಕಾರಣಿಗಳೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ನೇಪಾಳ ಗಡಿಯಲ್ಲಿ ಕಾರು ಪತ್ತೆ: ಬಹ್ರೈಚ್ ಜಿಲ್ಲೆಯ ರೂಪೈದಿಹಾ ಎಂಬ ಗಡಿ ಪ್ರದೇಶದಲ್ಲಿ ಶ್ರದ್ಧಾ ಅವರ ಕಾರು ಪತ್ತೆಯಾಗಿದ್ದು, ಅವರು ನೇಪಾಳಕ್ಕೆ ತೆರಳಿದ್ದಾರೆ ಎಂದು ಹೇಳಿ ಕಾರು ಪಾರ್ಕ್ ಮಾಡಿದ್ದರೆಂದು ತಿಳಿದುಬಂದಿದೆ.
ಸಾಮೂಹಿಕ ಹತ್ಯೆ ಮತ್ತು ಕಿರುಕುಳ ಆರೋಪ: ಮೃತ ಶಿವ ಶರ್ಮಾ ಅವರ ತಾಯಿ ರಂಜನಾ ಅವರು, ತನ್ನ ಮಗನನ್ನು ಶ್ರದ್ಧಾ ಮತ್ತು ಆಕೆಯ ಸಹೋದರಿ ಬಂಧನದಲ್ಲಿಟ್ಟು ದೈಹಿಕವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕ್ರಿಮಿನಲ್ ಲಿಂಕ್ ಮತ್ತು ತನಿಖೆ: 25,000 ರೂ. ಇನಾಮು ಹೊಂದಿರುವ ಅಪರಾಧಿ ರಿಷಭ್ ರೈ ಜೊತೆ ಶ್ರದ್ಧಾ ದುಬೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಖ್ತಾರ್ ಅನ್ಸಾರಿ ಗ್ಯಾಂಗ್ನೊಂದಿಗಿನ ಸಂಪರ್ಕದ ಬಗ್ಗೆಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮೃತನ ದೇಹದ ಮೇಲೆ ಸಿಗರೇಟ್ನಿಂದ ಸುಟ್ಟ ಗಾಯಗಳು, ಮೂಳೆ ಮುರಿತ ಹಾಗೂ ತೀವ್ರ ಗಾಯದ ಕುರುಹುಗಳು ಕಂಡುಬಂದಿದ್ದು, ಕಳೆದ 4-5 ತಿಂಗಳುಗಳಿಂದ ಆಕೆ ಶಿವ ಶರ್ಮಗೆ ಬ್ಲ್ಯಾಕ್ಮೇಲ್ ಹಾಗೂ ಕಿರುಕುಳ ನೀಡುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪ್ರಸ್ತುತ ಲಕ್ನೋ ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಹೊರತರಲು ನೇಪಾಳ ಗಡಿ ಭಾಗಕ್ಕೆ ತೆರಳಿ ತನಿಖೆ ಮುಂದುವರಿಸಿದ್ದಾರೆ.





Leave a comment