Site icon Kannada News-suddikshana

13 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನಕ್ಕೆ ಇದೇ ಕಾರಣ…! ಆರೋಪಿಗಳ ಪತ್ತೆಗೆ ಎದುರಾಗಿದೆಯಂತೆ ಸಾಕ್ಷ್ಯಾಧಾರಗಳ ಕೊರತೆ..!

SUDDIKSHANA KANNADA NEWS/ DAVANAGERE/ DATE:31-10-2024

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ – ನ್ಯಾಮತಿ ತಾಲೂಕಿನ ನ್ಯಾಮತಿ ಪಟ್ಟಣದ ನೆಹರೂ ರಸ್ತೆಯಲ್ಲಿನ ಎಸ್ ಬಿ ಐ ಬ್ಯಾಂಕ್ ಕಳ್ಳತನ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಬರೋಬ್ಬರಿ 13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿರುವ ಆರೋಪಿಗಳ ಪತ್ತೆ ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿದೆ. ಈ ನಡುವೆ ಆರೋಪಿಗಳ ಪತ್ತೆಗೆ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಬ್ಯಾಂಕ್ ಭದ್ರತೆಯಲ್ಲಿ ಲೋಪ ಕಂಡು ಬಂದಿದ್ದು, ಹಾಗಾಗಿ, ಸಾಕ್ಷ್ಯಾಧಾರಗಳ ಕೊರತೆ ಕಾಡುತ್ತಿದೆ. ಆದರೂ ಎಲ್ಲಾ ಆಯಾಮಗಳಲ್ಲಿಯೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವಲ್ಲಿ ತನಿಖೆ ನಡೆಸುತ್ತಿರುವ ಪೊಲೀಸ್ ತಂಡವು ನಿರತವಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳ್ಳತನ ಆಗಿರುವ ಕುರಿತಂತೆ ತನಿಖೆ ಪ್ರಗತಿಯಲ್ಲಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಚನ್ನಗಿರಿ ವಿಭಾಗದ ಎಎಸ್ ಪಿ ಶ್ಯಾಮ್ ವರ್ಗಿಸ್ ನೇತೃತ್ವದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಸೇರಿದಂತೆ
ಐದು ತಂಡಗಳು ತನಿಖೆ ನಡೆಸುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ನ್ಯಾಮತಿ ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಮಾಹಿತಿ ನೀಡಿದ್ದಾರೆ.

ಆರೋಪಿಗಳ ಪತ್ತೆಗೆ ಸ್ವಲ್ಪ ಕಾಲಾವಕಾಶ ಬೇಕಾಗಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ. ಕಳವು ಪ್ರಕರಣಗಳನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಲಾಗುವುದು. ಜನರು ತಾಳ್ಮೆ, ಸಹನೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದರು.

ಪೂರ್ವ ವಲಯ ಐಜಿಪಿ ರಮೇಶ್ ಬಾನೋತ್ ಅವರು ಈಗಾಗಲೇ ನ್ಯಾಮತಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮಾರ್ಗದರ್ಶನವನ್ನೂ ನೀಡಿದ್ದಾರೆ. ಭದ್ರತಾ ವ್ಯವಸ್ಥೆ ಸರಿಪಡಿಸಿಕೊಂಡು ಮುಂದಿನ ವಾರದಿಂದ ಬ್ಯಾಂಕ್
ಕಾರ್ಯಾರಂಭ ಮಾಡುವಂತೆಯೂ ವಹಿವಾಟು ಮುಂದುವರಿಸುವಂತೆಯೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬ್ಯಾಂಕ್ ನ ಹಿರಿಯ ಅಧಿಕಾರಿಯೊಬ್ಬರು ಬ್ಯಾಂಕ್ ನ ಗ್ರಾಹಕರು ಬ್ಯಾಂಕ್ ವಹಿವಾಟು ಸಂಪೂರ್ಣವಾಗಿ ಶುರುವಾಗುವವರೆಗೆ ಪಟ್ಟಣ ಮತ್ತು ಸವಳಂಗ ಗ್ರಾಮದಲ್ಲಿನರುವ ಸೇವಾ ಕೇಂದ್ರದಲ್ಲಿ ಹಣಕಾಸು ವಹಿವಾಟು ನಡೆಸಬಹುದು ಎಂದು ಹೇಳಿದ್ದಾರೆ.

Exit mobile version