SUDDIKSHANA KANNADA NEWS/DAVANAGERE/DATE:08_10_2025
ದಾವಣಗೆರೆ: ದಾವಣಗೆರೆ ನೂತನ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರು ಇಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮಹತ್ವದ ಘೋಷಣೆ ಮಾಡಿದ್ದಾರೆ.
ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಜಿಲ್ಲೆ ವತಿಯಿಂದ ಏರ್ಪಡಿಸಿದ್ದ ಚನ್ನಗಿರಿಯ ಅಜ್ಜಿಹಳ್ಳಿ ಬಳಿ ನೂತನವಾಗಿ ನಿರ್ಮಾಣ ಮಾಡಿರುವ ಬಸ್ ಘಟಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ನೂತನ ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರು:
ದಾವಣಗೆರೆ ನೂತನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕ್ಷೇತ್ರದಲ್ಲಿ ಹೆಚ್ಚು ಜನಪರ ಕೆಲಸ ಮಾಡಿದ ಪಂಪಾಪತಿ ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 10.83 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರಲ್ಲಿ ಚನ್ನಗಿರಿ ತಾಲೂಕಿನ 13.11 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು.
ಬೇಡಿಕೆ ಈಡೇರಿಕೆ ಸದ್ಬಳಕೆ ಮಾಡಿಕೊಳ್ಳಿ:
ಚನ್ನಗಿರಿಯಲ್ಲಿ ಕೆಎಸ್ ಆರ್ ಟಿಸಿ ನೂತನ ಬಸ್ ಘಟಕ ಆರಂಭದಿಂದ ಈ ಭಾಗದ ಜನರ ಬಹು ದಿನಗಳ ಬೇಡಿಕೆ ಈಡೇರಿದ್ದು ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಚನ್ನಗಿರಿ ಬಸ್ ಘಟಕ ಸ್ಥಾಪನೆಯಿಂದ ಈ ಭಾಗದಲ್ಲಿನ ವಾಹನ ಸಂಚಾರ ಸಮಸ್ಯೆ ನೀಗಿದ್ದು, ಹೊಸದಾಗಿ 40 ಹೆಚ್ಚುವರಿ ಬಸ್ ಘಟಕ್ಕೆ ಸೇರಿದಂತಾಗಿದೆ. ಇದರಿಂದ ತಾಲ್ಲೂಕಿನ ಪಟ್ಟಣ ಮತ್ತು ಗ್ರಾಮೀಣ ಭಾಗದ ಜನತೆಗೆ, ಸಾರ್ವಜನಿಕರಿಗೆ, ಮಹಿಳೆಯರು, ವಿಧ್ಯಾರ್ಥಿಗಳಿಗೆ ಹಾಗೂ ಹಳ್ಳಿಗಳಿಂದ ನಗರಕ್ಕೆ ಅಥವಾ ಇತರೆಡೆಗೆ ಹೋಗುವ ಕಾರ್ಮಿಕರಿಗೆ, ನೌಕರರಿಗೆ ಸಾಕಷ್ಟು ಅನುಕೂಲವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಬಸ್ ನಿಲ್ದಾಣಗಳ ಅವಶ್ಯಕತೆ ಇದೆ. ಅದೇ ರೀತಿ ಚನ್ನಗಿರಿ ತಾಲೂಕಿನಲ್ಲಿಯೂ ಸಹ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆ ವಿಭಾಗದ ಹೊನ್ನಾಳಿ, ಹರಿಹರ ಜಗಳೂರು ಸೇರ್ಪಡೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.