ಭದ್ರಾವತಿ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್‌ಟೇಬಲ್ ಒಬ್ಬರ ಕಿರುಕುಳಕ್ಕೆ ಬೇಸತ್ತು, ಕೆಎಸ್‌ಆರ್‌ಪಿ ಪೇದೆಯ ಪತ್ನಿ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹೊಸ ಸಿದ್ದಾಪುರದಲ್ಲಿ ಸಂಚಲನ ಮೂಡಿಸಿದೆ.
ಸರಣಿ ಆತ್ಮಹತ್ಯೆಯ ಆಘಾತ:
ಕಳೆದ ಫೆಬ್ರವರಿ 14 ರಂದು ಸ್ವಾತಿಯವರ ಪತಿ, ಕೆಎಸ್‌ಆರ್‌ಪಿ ಪೇದೆ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಸಾವಿನ ಶೋಕದಲ್ಲಿದ್ದ ಸ್ವಾತಿಯವರಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್‌ಟೇಬಲ್ ಮೋಹನ್ ಎಂಬಾತ ನಿರಂತರವಾಗಿ ಅಶ್ಲೀಲ ಸಂದೇಶ ಹಾಗೂ ಫೋನ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
“ನಾನು ಪೊಲೀಸವನು, ನನ್ನನ್ನು ಯಾರೂ ಏನೂ ಮಾಡಲಾಗದು” ಎಂದು ಬೆದರಿಕೆ ಹಾಕುತ್ತಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.
ಡೆತ್‌ನೋಟ್ ಮತ್ತು ಸಾಕ್ಷ್ಯ:
ಫೆಬ್ರವರಿ 20 ರ ಬೆಳಿಗ್ಗೆ ಸ್ವಾತಿ ತಮ್ಮ ತಾಯಿಗೆ ಸಂದೇಶ ಕಳುಹಿಸಿ, ಮಾನಸಿಕ ಹಿಂಸೆಯ ಬಗ್ಗೆ ಅಳಲು ತೋಡಿಕೊಂಡಿದ್ದರು. ತದನಂತರ ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕುಟುಂಬದವರು ಮೋಹನ್ ಕಳುಹಿಸಿರುವ ಅಶ್ಲೀಲ ಸಂದೇಶಗಳ ಪ್ರಿಂಟ್‌ಔಟ್ ಅನ್ನು ಸಾಕ್ಷಿಯಾಗಿ ನ್ಯೂಟೌನ್ ಪೊಲೀಸ್ ಠಾಣೆಗೆ ಸಲ್ಲಿಸಿದ್ದಾರೆ.
ತನಿಖೆ ಚುರುಕು:
ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಸರಣಿ ಆತ್ಮಹತ್ಯೆಯ ಹಿಂದೆ ಮೋಹನ್‌ನ ಪಾತ್ರದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಬ್ಲಾಕ್‌ಮೇಲ್ ಹಾಗೂ ಲೈಂಗಿಕ ಕಿರುಕುಳದ ಆರೋಪ ಸಾಬೀತಾದರೆ ಇಲಾಖೆಯ ಒಳಗಿರುವ ಕಪ್ಪು ಚುಕ್ಕೆಗಳು ಹೊರಬರಲಿವೆ.





Leave a comment