Site icon Kannada News-suddikshana

EXCLUSIVE: ಕಷ್ಟ ಬಂದ್ರೆ “ದೊಡ್ಡವರೆಲ್ಲಾ” ಕೊಲ್ಲೂರಿಗೆ ಬರೋದ್ಯಾಕೆ…? ನಟ ದರ್ಶನ್ ಪತ್ನಿ “ವಿಜಯ”ಲಕ್ಷ್ಮಿ ಸಂಕಷ್ಟ ಪರಿಹರಿಸ್ತಾಳಾ ಮೂಕಾಂಬಿಕಾ ತಾಯಿ…?

SUDDIKSHANA KANNADA NEWS/ DAVANAGERE/ DATE:26-07-2024

ಸುದ್ದಿಕ್ಷಣ ಡೆಸ್ಕ್: EXCLUSIVE STORY

ದಾವಣಗೆರೆ/ ಕೊಲ್ಲೂರು (Kollur, Udupi district): ಕೊಲ್ಲೂರಿನಲ್ಲಿ ನೆಲೆ ನಿಂತಿರುವ ಶ್ರೀ ಮೂಕಾಂಬಿಕಾ ತಾಯಿ ಸಂಕಷ್ಟಗಳನ್ನು ಪರಿಹರಿಸುವ ದೇವತೆ. ಕಷ್ಟ ಬಂದಾಗಲೆಲ್ಲಾ ದೊಡ್ಡವರು ಇಲ್ಲಿಗೆ ಬರುತ್ತಾರೆ. ತಾಯಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಅದರಲ್ಲಿಯೂ ಕಷ್ಟಾತಿಕಷ್ಟ ಬಂದಾಗ ಮೂಕಾಂಬಿಕೆ ಸನ್ನಿಧಿಗೆ ಬಂದು ಚಂಡಿಕಾ ಯಾಗ ನಡೆಸುತ್ತಾರೆ. ಚಂಡಿಕಾ ಯಾಗ ಎಂದರೇನು..? ಈ ತಾಯಿ ಸನ್ನಿಧಿಯಲ್ಲಿ ನಡೆಸಿದರೆ ಏನೆಲ್ಲಾ ಒಳಿತಾಗುತ್ತೆ? ಯಾರೆಲ್ಲಾ ಒಳಿತು ಕಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಪತ್ನಿ ವಿಜಯಲಕ್ಷ್ಮೀ ಮೂಕಾಂಬಿಕಾ ತಾಯಿ ಸನ್ನಿಧಿಯಲ್ಲಿ ಚಂಡಿಕಾ ಯಾಗ ನೆರವೇರಿಸಿದ್ದೇಕೆ ಎಂಬ ಕುರಿತ ಎಕ್ಸ್ ಕ್ಲ್ಯೂಸಿವ್ ಸ್ಟೋರಿ.

ತಮಿಳುನಾಡಿನ ಎಂ. ಜಿ, ರಾಮಚಂದ್ರ, ಮಾಜಿ ಸಿಎಂ ದಿವಂಗತ ಜಯಲಲಿತಾ, ಸಂಗೀತ ಮಾಂತ್ರಿಕ ಇಳಯರಾಜ, ಖ್ಯಾತ ಹಿನ್ನೆಲೆ ಗಾಯಕ ಜೇಸುದಾಸ್, ಸೂಪರ್ ಸ್ಟಾರ್ ರಜಿನಿಕಾಂತ್, ಮಲೆಯಾಳಂ ಖ್ಯಾತ ನಟ ಮುಮ್ಮುಟ್ಟಿ, ಮಾಜಿ ಕ್ರಿಕೆಟಿಗ ಶ್ರೀಶಾಂತ್, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಮಲೆಯಾಳಂನ ಖ್ಯಾತ ನಟರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ದೇಶ ಮಾತ್ರವಲ್ಲ, ವಿದೇಶದಲ್ಲಿರುವವರು ಸಹ ಕೊಲ್ಲೂರು ತಾಯಿ ಬಳಿ ಬಂದಿದ್ದಾರೆ. ಸಂಕಷ್ಟ ಪರಿಹರಿಸಿಕೊಂಡಿದ್ದಾರೆ. ಅದರಲ್ಲಿಯೂ ಬಗೆಹರಿಯದ ಕಷ್ಟ, ನೋವು, ದುಃಖವನ್ನೂ ಪರಿಹರಿಸಿಕೊಂಡಿದ್ದಾರೆ. ಪರಿಹರಿಸಿಕೊಳ್ಳುತ್ತಲೂ ಇದ್ದಾರೆ.

ಈ ಸುದ್ದಿಯನ್ನೂ ಓದಿ: ದಾವಣಗೆರೆ ಮಹಿಳಾ ಮೊದಲ ಎಂಪಿ ಲೋಕಸಭೆಯಲ್ಲಿ ಮಾಡಿದ ಭಾಷಣದ ಸ್ಪೆಷಾಲಿಟಿ ಏನು ಗೊತ್ತಾ…?

ಕುಂದಾಪುರ ತಾಲೂಕಿನ ಬೈಂದೂರು ವ್ಯಾಪ್ತಿಗೆ ಬರುವ ಕೊಲ್ಲೂರಿನಲ್ಲಿ ನೆಲೆ ನಿಂತಿರುವ ಮೂಕಾಂಬಿಕಾ ತಾಯಿ ದೇಗುಲ ಅತ್ಯಂತ ಪವಿತ್ರ ಶ್ರದ್ಧಾ ಭಕ್ತಿಯ ತಾಣ. ಕೋಟ್ಯಂತರ ಭಕ್ತರನ್ನು ಹೊಂದಿರುವ ದೇವಿಯ ಸನ್ನಿಧಾನದಲ್ಲಿ ನಡೆಯುವ ಪೂಜೆಗಳಿಗೆ ತುಂಬಾನೇ ಮಹತ್ವ ಇದೆ. ಅದರಲ್ಲಿಯೂ ಚಂಡಿಕಾ ಹೋಮಕ್ಕೆ ವಿಶೇಷ ಸ್ಥಾನ. ಅಂದ ಹಾಗೆ, ಕೊಲ್ಲೂರಿನಲ್ಲಿ ಚಂಡಿಕಾಯಾಗ ನಡೆಸಬೇಕೆಂದರೆ ಸಾಮಾನ್ಯ ಜನರು ವರ್ಷಗಟ್ಟಲೇ ಕಾಯಲೇ ಬೇಕು.

ಚಂಡಿಕಾ ಯಾಗ ಮಹತ್ವವೇನು…?

ಕೊಲ್ಲೂರಿನಲ್ಲಿ ನಡೆಯುವ ಅತ್ಯಂತ ಪವಿತ್ರ ಮತ್ತು ಮಹತ್ವದ್ದು ಚಂಡಿಕಾ ಯಾಗ ಅಥವಾ ಚಂಡಿಕಾ ಹೋಮ. ದೇವಿಗೆ ಅತ್ಯಂತ ಪ್ರಿಯ ಮತ್ತು ಬಾಕಿ ಎಲ್ಲಾ ಹೋಮಗಳಿಗಿಂತ ವೈಶಿಷ್ಟವಾಗಿ ನಡೆಯುವಂಥ ಶಕ್ತಿಯುತ ಯಾಗ. ಕೊಲ್ಲೂರಿನ
ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿನಿತ್ಯ ನಡೆಯುವ ಪೂಜೆಗಳು ಒಂದಕ್ಕಿಂತ ಮತ್ತೊಂದು ಮಹತ್ವದ್ದು. ಸಹಸ್ರನಾಮ ಕುಂಕುಮಾರ್ಚನೆ, ತ್ರಿಶತಿ ಕುಂಕುಮಾರ್ಚನೆ, ಅಷ್ಟೋತ್ತರ ಕುಂಕುಮಾರ್ಚನೆ, ತ್ರಿಶತಿ ಭಸ್ಮಾರ್ಚನೆ, ಪಂಚಾಮೃತ, ಕ್ಷೀರಾಭಿಷೇಕ, ಪಂಚಾಮೃತ ಹೀಗೆ ಈ ದೇವಿ ನೆಲೆಸಿರುವ ನಡೆಯುವ ಪೂಜೆಗಳು ಒಂದಕ್ಕಿಂತ ಮತ್ತೊಂದು ಶ್ರೇಷ್ಠ.

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಬಂದು ಹೋಗುವ ಭಕ್ತರ ಸಂಖ್ಯೆ ಲೆಕ್ಕಕ್ಕೇ ಇಲ್ಲ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ಮೂಲೆಗಳಿಂದ ಕೋಟ್ಯಂತರ ಭಕ್ತರು ಬಂದು ದೇವಿಯ ಸನ್ನಿಧಿಯಲ್ಲಿ ಇಷ್ಟಾರ್ಥ
ಸಿದ್ಧಿಗಾಗಿ ಚಂಡಿಕಾಯಾಗ ನಡೆಸುತ್ತಾರೆ.

ಶ್ಲೋಕಗಳು, ಮಂತ್ರಗಳ ಪಠಣ ಹೇಗೆ…?

ಶ್ರೀದೇವಿ ಮಹಾತ್ಮೆಯ 700 ಶ್ಲೋಕಗಳನ್ನು ಓದಿ ಮತ್ತು 700 ಮಂತ್ರಗಳನ್ನು ಹೇಳುತ್ತಾ, 700 ಬಾರಿ ಪಾಯಸವನ್ನು ಅಗ್ನಿಗೆ ಹಾಕಲಾಗುತ್ತದೆ. ಈ ಸೇವೆಯು ಸುಮಾರು 2 ಗಂಟೆಯದ್ದಾಗಿದ್ದು, ಆರರಿಂದ ಏಳು ಪುರೋಹಿತರು ಇದನ್ನು ನಡೆಸಿಕೊಡುತ್ತಾರೆ. ಪ್ರತಿದಿನವೂ ಇಲ್ಲಿ ಚಂಡಿಕಾ ಹೋಮದ ಸೇವೆಯನ್ನು ನೆರವೇರಿಸುತ್ತಾರೆ. ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಜನಸಾಮಾನ್ಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಈ ಹೋಮ ನಡೆಸುವುದು ಸಾಮಾನ್ಯ.

ದಿನಕ್ಕೆ ಎಷ್ಟು ಚಂಡಿಕಾ ಯಾಗ ನಡೆಯುತ್ತೆ…?

ದಿನಕ್ಕೆ ಹೆಚ್ಚು ಅಂದರೆ 12 ಚಂಡಿಕಾಯಾಗ ಮಾತ್ರ ದೇವಿ ಸನ್ನಿಧಾನದಲ್ಲಿ ನಡೆಯುತ್ತದೆ. ಇದರಲ್ಲಿ ಕೇವಲ 8 ಸಾಮಾನ್ಯ, ವಿಐಪಿ ಮೂರರಿಂದ ನಾಲ್ಕು ನೆರವೇರುತ್ತದೆ. ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಚಂಡಿಕಾ ಹೋಮಕ್ಕೆ ಭಾರೀ ಬೇಡಿಕೆ ಇರುವುದಂತೂ ಸತ್ಯ.

ವಿಜಯಲಕ್ಷ್ಮೀಗೆ ಸಿಗುತ್ತಾ ಕೃಪಕಟಾಕ್ಷ…?

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಶುಕ್ರವಾರ ಚಂಡಿಕಾ ಯಾಗ ನಡೆಸಿದ್ದಾರೆ. ಶುಕ್ರವಾರ ಚಂಡಿಕಾ ಯಾಗ ನಡೆಸಿದರೆ ಶ್ರೇಷ್ಠ ಎಂಬ ಮಾತಿದೆ. ತಾಯಿಗೆ ಹೆಚ್ಚು ಭಕ್ತರು ನಡೆದುಕೊಳ್ಳುವ ದಿನವೂ ಹೌದು. ಮಂಗಳವಾರ, ಶುಕ್ರವಾರ ಶ್ರೇಷ್ಠ ದಿನ ಎಂಬ ನಂಬಿಕೆ ಇದೆ. ದರ್ಶನ್ ತೂಗುದೀಪ ಅವರ ಪತ್ನಿ ಪತಿ ಬಿಡುಗಡೆಯಾಗಬೇಕು, ಸಂಕಷ್ಟ ಪರಿಹಾರವಾಗಬೇಕು ಎಂಬ ಸಂಕಲ್ಪ ತೊಟ್ಟು ಚಂಡಿಕಾ ಯಾಗ ನೆರವೇರಿಸಿದ್ದಾರೆ. ಮೂಕಾಂಬಿಕಾ ತಾಯಿಯ ಬಳಿ ಬಂದು ಕಷ್ಟ ಪರಿಹರಿಸಿಕೊಂಡವರು ಲೆಕ್ಕಕ್ಕೇ ಸಿಗದು.

ಕೊಲ್ಲೂರು ಮೂಕಾಂಬಿಕಾ ತಾಯಿ ಸನ್ನಿಧಿಗೆ ಬರುವ ಭಕ್ತರೆಲ್ಲರೂ ಕಷ್ಟ ಪರಿಹರಿಸಿಕೊಂಡು ಹೋಗಿದ್ದಾರೆ. ಜೀವನವೇ ಬೇಡ, ಬ್ಯುಸಿನೆಸ್ ಬೇಡ, ತಾವು ಸಾಧಿಸಿರುವ ಸಾಧನೆಯ ಕ್ಷೇತ್ರ ಬಿಡಬೇಕೆಂದುಕೊಂಡವರು ಮತ್ತೆ ಧೂಳಿನಿಂದ ಮತ್ತೆ ಎದ್ದು ಬಂದ ಚರಿತ್ರೆಯೂ ಇದೆ. ಮೂಕಾಂಬಿಕಾ ತಾಯಿಯು ಸಂಕಷ್ಟ ಪರಿಹರಿಸಿದ್ದರಿಂದಲೇ ಇಲ್ಲಿಗೆ ಬರುವವರ ಸಂಖ್ಯೆ ಜಾಸ್ತಿ ಇದೆ. ತಮಿಳುನಾಡಿನ ಖ್ಯಾತ ನಟ ಎಂಜಿಆರ್ ಅವರು ಇಲ್ಲಿಗೆ ಬಂದು ಹೋದ ಮೇಲೆಯೇ ಮುಖ್ಯಮಂತ್ರಿಯಾಗಿದ್ದು, ಅಕ್ರಮ ಆಸ್ತಿ ಗಳಿಕೆ ಕೇಸ್ ನಲ್ಲಿ ಜಯಲಲಿತಾ ಅವರು ಬಂಧನಕ್ಕೊಳಗಾಗಿದ್ದಾಗ ಇಲ್ಲಿಗೆ ಬಂದು ಜಯಲಲಿತಾ ಪಕ್ಷದವರು ಚಂಡಿಕಾ ಯಾಗ ನೆರವೇರಿಸಿದ್ದರು. ಬಸ್ ನಲ್ಲಿ ಬಂದು ಪೂಜೆ ಸಲ್ಲಿಸಿದ್ದರು, ಚಂಡಿಕಾ ಯಾಗ ನಡೆಸಿದ್ದರು. ಕಾಕತಾಳೀಯ ಎಂಬಂತೆ ಜಯಲಲಿತಾ ಅವರು ಬಿಡುಗಡೆ ಆಗಿದ್ದರು.

ಇದೆಲ್ಲಾ ವಿಚಾರ ಅರಿತ ವಿಜಯಲಕ್ಷ್ಮೀ ಅವರು ಕೊಲ್ಲೂರಿಗೆ ಬಂದು ಶ್ರದ್ಧಾ ಭಕ್ತಿಯಿಂದ ತಾಯಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತು, ಚಂಡಿಕಾ ಯಾಗ ನೆರವೇರಿಸಿದ್ದಾರೆ. ದೇವಸ್ಥಾನದ ಅಡಿಗರು ಪೂಜೆ ನೆರವೇರಿಸಿಕೊಟ್ಟಿದ್ದಾರೆ. ನಟ ದರ್ಶನ್ ಈಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿದ್ದಾರೆ. ಮೂಕಾಂಬಿಕಾ ತಾಯಿ ಆಶೀರ್ವದಿಸುತ್ತಾಳಾ? ಚಾಲೆಂಜಿಂಗ್ ಸ್ಟಾರ್ ಜೈಲಿನಿಂದ ಹೊರ ಬರುತ್ತಾರಾ? ವಿಜಯಲಕ್ಷ್ಮೀ ಅವರ ಇಷ್ಟಾರ್ಥ ಸಿದ್ಧಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Exit mobile version