ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಅಭಾವವನ್ನು ಎದುರಿಸಲು ಮೊದಲ ಆದ್ಯತೆಯಾಗಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಮುಖಾಂತರ ಪಡೆಯಲಾಗುತ್ತಿದೆ. ಅಲ್ಲದೆ, ಅಗತ್ಯವಿರುವ ಸ್ಥಳದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ತಕ್ಷಣದ ಕ್ರಮಗಳು ಮತ್ತು ಮೂಲಸೌಕರ್ಯ ನಿರ್ವಹಣೆ
ನೀರು ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಫ್ಲಶಿಂಗ್ ಮತ್ತು ಆಳಗೊಳಿಸುವುದರೊಂದಿಗೆ ನೀರಿನ ಮೂಲಗಳನ್ನು ಹೆಚ್ಚಿಸುವುದು. ಅನಿವಾರ್ಯ ಸಂದರ್ಭಗಳಲ್ಲಿ ಕೊಳವೆಬಾವಿಗಳನ್ನು ಕೊರೆಯುವುದು ಹಾಗೂ ಅತ್ಯಗತ್ಯವೆಂದು ಕಂಡು ಬಂದಲ್ಲಿ ಸಂಬಂಧಪಟ್ಟ ಭೂವಿಜ್ಞಾನಿಗಳ ವರದಿಯನುಸಾರ ಸೂಕ್ತ ಕ್ರಮ ಕೈಗೊಂಡು, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕಾಮಗಾರಿಗಳನ್ನು ಕೈಗೊಳ್ಳುವುದು.
ರಾಜ್ಯವು ಮೂಲತಃ ಶುಷ್ಕ ಪ್ರದೇಶವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿ ಇರುವ ಬಹುತೇಕ ಜಲಮೂಲಗಳು ಬೇಸಿಗೆಯಲ್ಲಿ ಬತ್ತಿಹೋಗಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವವಿರುತ್ತದೆ. ಸದರಿ ಸಮಸ್ಯೆಯನ್ನು ದೈನಂದಿನ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲು ಕ್ರಮವಹಿಸಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ನೀರಿನ ಅಭಾವ ಎದುರಾದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಗುಣಮಟ್ಟದ ಮೇಲೆ ನಿಗಾ
ಶುದ್ಧ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಗ್ರಾಮಗಳ ಮಟ್ಟದಲ್ಲಿ ಪ್ರಾಥಮಿಕ ಹಂತವಾಗಿ ಎಲ್ಲ ಕುಡಿಯುವ ನೀರಿನ ಮೂಲಗಳ ಮಾದರಿಗಳನ್ನು, ಪ್ರತಿ ಗ್ರಾಮದಲ್ಲಿ ಕನಿಷ್ಠ 3 ನಳ ನೀರು ಸಂಪರ್ಕಗಳ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೂಡಲೇ ಕೈಗೊಂಡು ಮಾಹಿತಿಗಳನ್ನು ದಾಖಲಿಸಲು ಸೂಚಿಸಲಾಗಿದೆ. ಎಲ್ಲ ಕುಡಿಯುವ ನೀರಿನ ಮೇಲ್ಮಟ್ಟದ ಜಲಸಂಗ್ರಹಾರ (OHT)ಗಳನ್ನು ಮಾರ್ಗಸೂಚಿಗಳ ಅನ್ವಯ ಶುಚಿಗೊಳಿಸುವಂತೆ ನಿರ್ದೇಶಿಸಲಾಗಿದೆ.
ರಾಜ್ಯದಲ್ಲಿ ಈಗಾಗಲೇ 21 ಜಿಲ್ಲೆಗಳ 144 ತಾಲ್ಲೂಕುಗಳಲ್ಲಿನ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುತ್ತದೆ. ಇವುಗಳ ಪೈಕಿ 31 ಗ್ರಾಮಗಳಿಗೆ 96 ಟ್ಯಾಂಕರ್‌ಗಳ ಮುಖಾಂತರ ಹಾಗೂ 152 ಗ್ರಾಮಗಳಿಗೆ 154 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರನ್ನು ಒದಗಿಸಲು ಕ್ರಮವಹಿಸಲಾಗಿದೆ.
ಮಾರ್ಚ್ 2026ರಲ್ಲಿ ಫ್ಲಶಿಂಗ್ ಹಾಗೂ ಆಳ ಹೆಚ್ಚಿಸುವ ಮೂಲಕ 1,053 ಕೊಳವೆ ಬಾವಿಗಳನ್ನು ದುರಸ್ತಿಗೊಳಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದು ಅವಶ್ಯಕವೆಂದು ನಿರೀಕ್ಷಿಸಲಾಗಿದ್ದು, ಆದ್ಯತೆಯ ಮೇರೆಗೆ ಕ್ರಮವಹಿಸಲು ಎಲ್ಲ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.
2026ನೇ ಸಾಲಿನ ಬೇಸಿಗೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಅವಶ್ಯವಿರುವ ಮೊತ್ತವನ್ನು ಕೇಂದ್ರ ಮತ್ತು ರಾಜ್ಯಗಳ ಬರ ಪರಿಹಾರ ನಿಧಿ ಹಾಗೂ ಇಲಾಖೆಯ ಟಾಸ್ಕ್‌ಫೋರ್ಸ್ ಅಡಿ ಸಂಯೋಜಿತಗೊಳಿಸಿ ಬಳಸಿಕೊಳ್ಳಬೇಕು. ಕುಡಿಯುವ ನೀರನ್ನು ಒದಗಿಸಲು ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಹಾಗೂ ಜಿಲ್ಲಾಡಳಿತದ ಸಮನ್ವಯದೊಂದಿಗೆ ಕ್ರಮ ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
- Drinking Water Crisis
- Drought Relief Fund
- Private Borewell Rental
- Priyank Kharge
- RDPR Karnataka
- Rural Water Supply
- Summer 2026
- Tanker Water Supply
- Water Quality Testing
- Zilla Panchayat
- ಕುಡಿಯುವ ನೀರು
- ಗ್ರಾಮ ಪಂಚಾಯತಿ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಟ್ಯಾಂಕರ್ ನೀರು ಸರಬರಾಜು
- ನೀರಿನ ಗುಣಮಟ್ಟ ಪರೀಕ್ಷೆ
- ಪ್ರಿಯಾಂಕ್ ಖರ್ಗೆ
- ಬರ ಪರಿಹಾರ ನಿಧಿ
- ಬೇಸಿಗೆ ನೀರಿನ ಸಮಸ್ಯೆ
- ಬೋರ್ವೆಲ್ ಬಾಡಿಗೆ





Leave a comment