Site icon Kannada News-suddikshana

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ: ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ. ನಿನ್ನೆ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು.

ಮುಂಜಾಗ್ರತಾ ಕ್ರಮವಾಗಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿದ್ದು, ಪದವಿ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

ಮುಂದಿನ 5 ದಿನ ಭಾರೀ ಮಳೆ: ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರಿನ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಸಾರ್ವಜನಿಕರು ಹಾಗೂ ಮೀನುಗಾರರು ನದಿ, ನೀರಿರುವ ಪ್ರದೇಶ ಹಾಗೂ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ವಿದ್ಯುತ್‌ ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್‌ ತಂತಿಗಳಿಂದ ದೂರವಿರಲು ಸೂಚಿಸಲಾಗಿದೆ.

Exit mobile version