SUDDIKSHANA KANNADA NEWS/DAVANAGERE/DATE:21_12_2025
ದಾವಣಗೆರೆ: ದಕ್ಷಿಣ ಕೊರಿಯಾದ ಚಿಯಾಂಗ್ಜು ನಗರದಲ್ಲಿ ವರ್ಲ್ಡ್ ಕ್ಯಾಲಿಗ್ರಫಿ ಅಸೋಸಿಯೇಷನ್ ಆಯೋಜಿಸಿದ 22ನೇ ಚಿಯಾಂಗ್ಜು ಜಿಕ್‌ಜಿ & ಹುನ್‌ಮಿನ್‌ಜಿಯೊಂಗುಮ್ ವಿಶ್ವ ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಕನ್ನಡ ಕ್ಯಾಲಿಗ್ರಫಿ ಕ್ಷೇತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಮತ್ತು ಐತಿಹಾಸಿಕ ಗೌರವ ಲಭಿಸಿದೆ.
ಕನ್ನಡ ಕ್ಯಾಲಿಗ್ರಾಫರ್ ಸುರೇಶ್ ಎಸ್. ವಾಘ್ಮೋರೆ ಅವರಿಗೆ ಟಾಪ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಲಾಗಿದೆ. ಈ ಪ್ರಶಸ್ತಿ ಮೊದಲ ಬಾರಿಗೆ ಕನ್ನಡ ಕ್ಯಾಲಿಗ್ರಫಿಗೆ ಲಭಿಸಿರುವ ಅಂತರರಾಷ್ಟ್ರೀಯ ಗೌರವ ಎಂಬುದು ವಿಶೇಷ.
ವಿಶ್ವದ ಅನೇಕ ದೇಶಗಳಿಂದ ಕಲಾವಿದರು ಭಾಗವಹಿಸಿದ್ದ ಈ ಪ್ರತಿಷ್ಠಿತ ಪ್ರದರ್ಶನದಲ್ಲಿ, ಸುರೇಶ್ ಎಸ್. ವಾಘ್ಮೋರೆ ಅವರ ಕನ್ನಡ ಕ್ಯಾಲಿಗ್ರಫಿ ಕೃತಿ ಜ್ಯೂರಿಗಳ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಕನ್ನಡ ಲಿಪಿಯ ಸೌಂದರ್ಯ, ಅಕ್ಷರಗಳ ವಿನ್ಯಾಸ, ಹರಿವು ಮತ್ತು ಅದರ ಸಾಂಸ್ಕೃತಿಕ ಆಳವನ್ನು ಸಮಕಾಲೀನ ದೃಷ್ಟಿಕೋನದೊಂದಿಗೆ ಪ್ರಸ್ತುತಪಡಿಸಿರುವುದು ಪ್ರಶಸ್ತಿಗೆ ಪ್ರಮುಖ ಕಾರಣವಾಗಿದೆ ಎಂದು ಜ್ಯೂರಿ ಸದಸ್ಯರು ತಿಳಿಸಿದ್ದಾರೆ.
ಕನ್ನಡ ಲಿಪಿಯು ಶಿಲಾಶಾಸನಗಳು, ತಾಮ್ರಶಾಸನಗಳು ಮತ್ತು ತಾಳೆಹಸ್ತಪ್ರತಿಗಳ ಮೂಲಕ ಶತಮಾನಗಳ ಕಾಲ ಬೆಳೆಯುತ್ತಾ ಬಂದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಈ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿ, ಅದನ್ನು ಸಮಕಾಲೀನ ಕ್ಯಾಲಿಗ್ರಫಿ ರೂಪದಲ್ಲಿ ಮಂಡಿಸಿರುವುದು ಸುರೇಶ್ ಅವರ ಕೆಲಸದ ವಿಶೇಷತೆ. ಅವರು ಲಿಪಿಯನ್ನು ಕೇವಲ ಬರವಣಿಗೆಯ ಸಾಧನವಾಗಿ ಮಾತ್ರವಲ್ಲದೆ, ಒಂದು ಜೀವಂತ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿದೆ.
ಈ ಸಾಧನೆ ಕನ್ನಡ ಭಾಷೆ ಮತ್ತು ಲಿಪಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆಯುವಂತಾಗಿದೆ. ಇದರಿಂದ ಕನ್ನಡ ಕ್ಯಾಲಿಗ್ರಫಿಯು ಸ್ಥಳೀಯ ಮಟ್ಟಕ್ಕೆ ಮಾತ್ರ ಸೀಮಿತವಲ್ಲದೆ, ಅಂತರರಾಷ್ಟ್ರೀಯ ಕಲಾ ವೇದಿಕೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಕ್ಯಾಲಿಗ್ರಫಿಗೆ ಈ ಮಟ್ಟದ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಿಗೂ ಹೆಮ್ಮೆಯ ವಿಷಯವಾಗಿದೆ.
ಈ ಗೌರವ ನನ್ನ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಕನ್ನಡ ಲಿಪಿ ಮತ್ತು ಅದರ ಪರಂಪರೆಗೆ ದೊರೆತ ಗೌರವ. ಕರ್ನಾಟಕದಿಂದ ಕೊರಿಯಾ ತನಕ ಕನ್ನಡ ಲಿಪಿಯ ಸೌಂದರ್ಯವನ್ನು ತಲುಪಿಸುವ ಅವಕಾಶ ದೊರೆತಿರುವುದು ನನಗೆ ಅಪಾರ ಸಂತೋಷ ನೀಡಿದೆ ಎಂದು ಪ್ರಶಸ್ತಿ ಪುರಸ್ಕೃತ ಸುರೇಶ್ ಎಸ್. ವಾಘ್ಮೋರೆ ತಿಳಿಸಿದ್ದಾರೆ.
ಈ ಪ್ರಶಸ್ತಿ ಮುಂದಿನ ಪೀಳಿಗೆಗೆ ಕನ್ನಡ ಕ್ಯಾಲಿಗ್ರಫಿಯ ಮಹತ್ವವನ್ನು ಪರಿಚಯಿಸುವಲ್ಲಿ ಪ್ರೇರಣೆಯಾಗಲಿದೆ ಎಂಬ ಅಭಿಪ್ರಾಯವನ್ನು ಕಲಾವಿದ ವಲಯ ವ್ಯಕ್ತಪಡಿಸಿದೆ. ಕನ್ನಡ ಲಿಪಿಯ ಶೋಧನೆ, ಸಂರಕ್ಷಣೆ ಮತ್ತು ಸಮಕಾಲೀನ ಕಲಾ ಅಭಿವ್ಯಕ್ತಿಗೆ ಈ ಗೌರವ ಹೊಸ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.





Leave a comment