SUDDIKSHANA KANNADA NEWS/ KALABURAGI/ DATE:13-09-2023
ಕಲಬುರಗಿ (Kalaburagi): ತಾಲೂಕಿನ ಸೀತನೂರು ಗ್ರಾಮದ ಮಹಿಳೆಯೊಬ್ಬರು ಮದುವೆಯಾದ ಮೂರೇ ವರ್ಷಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಸೀತನೂರು ಗ್ರಾಮದ ಶಾಹೀದಾ ಬೇಗಂ (26) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಗೃಹಿಣಿ. ಆದ್ರೆ, ಮೃತಪಟ್ಟ ಮಹಿಳೆಯ ಕುಟುಂಬದವರು ಪತಿ ಹಾಗೂ ಆತನ ಕುಟುಂಬದವರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಜೇವರ್ಗಿ ತಾಲೂಕಿನ ಗೌಂವ್ಹಾರ ಗ್ರಾಮದ ಶಾಹೀದಾ ಹಾಗೂ ಸೀತನೂರ ಗ್ರಾಮದ ಖಾಜಾ ಹುಸೇನ್ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಮದುವೆ ತಮ್ಮ ಬಳಿಯಿದ್ದ ಜಾಗ ಮಾರಿ ಮತ್ತಷ್ಟು ಸಾಲ ಮಾಡಿ ನಾಲ್ಕು ತೊಲ ಚಿನ್ನಾಭರಣ, ಐವತ್ತು ಸಾವಿರ ರೂಪಾಯಿ ನಗದು ನೀಡಿ ಮದುವೆ ಮಾಡಿಕೊಟ್ಟಿದ್ದರು. ಮೊದಲೆಲ್ಲಾ ಸಂಸಾರ ಚೆನ್ನಾಗಿತ್ತು. ಬರಬರುತ್ತಾ ಗಂಡ ಹೆಂಡತಿ ನಡುವೆ ಗಲಾಟೆ ನಡೆಯುತಿತ್ತು. ನಿತ್ಯ ಕುಡಿದು ಬಂದು ಶಾಹೀದಾ ಬೇಗಂರಿಗೆ ತೊಂದರೆ ಕೊಡುತ್ತಿದ್ದ. ಕಿರುಕುಳ ನೀಡುತ್ತಿದ್ದ. ಥಳಿಸುತ್ತಿದ್ದ, ತವರಿನಿಂದ ಹಣ, ಚಿನ್ನಾಭರಣ ತರುವಂತೆ ಪೀಡಿಸುತ್ತಿದ್ದ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ತಿ ಮಾರಿ ಮದುವೆ ಮಾಡಿಕೊಟ್ಟು ದುಡಿಯಲು ಹೈದರಾಬಾದ್ ಗೆ ಹೋಗಿದ್ದಾರೆ. ತನ್ನ ಸಹೋದರಿ ಮುಂದೆ ಹಲವು ಬಾರಿ ಗಂಡನ ಕುರಿತಂತೆ ಹೇಳಿಕೊಂಡಿದ್ದರಂತೆ. ನಿತ್ಯವೂ ಕುಡಿದು ಬಂದು ವರದಕ್ಷಿಣಗೆ ಪೀಡಿಸುತ್ತಾನೆ. ಬದುಕೇ ಸಾಕಾಗಿ ಹೋಗಿದೆ ಎಂದು ಹೇಳಿಕೊಂಡಿದ್ದರಂತೆ. ಹಲವು ಬಾರಿ ರಾಜಿ ಪಂಚಾಯಿತಿಯೂ ನಡೆದಿತ್ತು ಎಂದು ಹೇಳಲಾಗಿದೆ.
ಈ ಸಂಬಂಧ ಫರಹತಾಬಾದ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಶಾಹೀದಾ ಪತಿ ಖಾಜಾ ಹುಸೇನ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆ ಮತ್ತು ಮರಣೋತ್ತರ ವರದಿ ಬಂದ ಬಳಿಕ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಸ್ಪಷ್ಟವಾಗಲಿದೆ.