Site icon Kannada News-suddikshana

Medical Student: ಕೆಸರು ಕ್ರೀಡೆ ಕಲರವ: ಜೆಜೆಎಂ ವೈದ್ಯಕೀಯ ವಿದ್ಯಾರ್ಥಿಗಳ ಸಂಭ್ರಮವೋ.. ಸಂಭ್ರಮ…

Kesaru Gadde

Kesaru Gadde

SUDDIKSHANA KANNADA NEWS/ DAVANAGERE/ DATE:15-07-2023

ದಾವಣಗೆರೆ: ಅವರೆಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು (Medical Student). ಮೆಟ್ರೋಪಾಲಿಟಿನ್ ಸಿಟಿಯಿಂದ ಬಂದವರು. ಎಷ್ಟೋ ಮಂದಿ ಕೆಸರಿಗೆ ಇಳಿದಿದ್ದೇ ಗೊತ್ತಿಲ್ಲ. ಯಾಕೆಂದರೆ ಪೋಷಕರು ಉನ್ನತ ಹುದ್ದೆ, ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಹಲವರು ಮಕ್ಕಳನ್ನು ನಗರ ಪ್ರದೇಶಗಳಲ್ಲಿ ಓದಿಸಿದವರು. ಇವರೆಲ್ಲರಿಗೂ ಕೆಸರಿನಲ್ಲಿಯೂ ಕ್ರೀಡೆ ಆಡಬಹುದು ಎಂಬುದು ಗೊತ್ತೇ ಇರಲಿಲ್ಲ. ಇಂಥದ್ದೊಂದು ಅವಕಾಶವನ್ನು ಜೆಜೆಎಂ ಮೆಡಿಕಲ್ (Medical) ಕಾಲೇಜು ಅವಕಾಶ ಮಾಡಿಕೊಟ್ಟಿತ್ತು.

ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೆಸರು ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ವೀಕೆಂಡ್ ನ ಶನಿವಾರವಾದ ಇಂದು ಕಾಲೇಜು ವಿದ್ಯಾರ್ಥಿಗಳಿಗೆ ಹಬ್ಬದ ವಾತಾವರಣ ನಿರ್ಮಾಣದಂತೆ ಭಾಸವಾಗುತಿತ್ತು.

 

ನಗರದ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಂಘವು ಶಾಮನೂರಿನ ಗಾಜಿನ ಮನೆ ಎದುರುಗಡೆ ವೀರಬಸಪ್ಪನವರ ಗದ್ದೆಯಲ್ಲಿ76 ನೇ ಸ್ವಾತಂತ್ರೋತ್ಸವದ ಅಂಗವಾಗಿ ಇಂದಿನಿಂದ ಜುಲೈ 30ರವರೆಗೆ ವಿವಿಧ ದೇಸಿ ಕ್ರೀಡೆಗಳ
ಉತ್ಸವ ಆಯೋಜಿಸಿದೆ. ಇದಕ್ಕೆ ಮಳೆಗಾಲದ ಉತ್ಸವ ಅಥವಾ ಮಾನ್ಸೂನ್ ಫಿಯೆಸ್ಟಾ ಎಂಬ ಹೆಸರಿನಡಿ ಕ್ರೀಡೆಗಳನ್ನು ನಡೆಸಲಾಯಿತು. ದೇಸಿ ಸೊಬಗು ಪರಿಚಯಿಸಬೇಕು ಎಂಬ ಸದುದ್ದೇಶದಿಂದ ಈ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು.

ಎಷ್ಟೋ ಮಂದಿಗೆ ಗ್ರಾಮೀಣ ಪ್ರದೇಶದ ಸೊಬಗು, ಸೊಗಡು ಪರಿಚಯ ಕಡಿಮೆ. ಇಲ್ಲಿನ ಮಳೆಗಾಲದ ಆಟಗಳನ್ನು ಅವರಿಗೆ ತಿಳಿಸಿಕೊಡಬೇಕೆಂಬ ಕಾರಣಕ್ಕೆ ಈ ಸ್ಪರ್ಧೆಗಳನ್ನು ನಡೆಸಲಾಯಿತು.

ಈ ಸುದ್ದಿಯನ್ನೂ ಓದಿ:

Davanagere: ಅಪ್ಪನ ಬಗ್ಗೆ ಸಾಫ್ಟ್ ಕಾರ್ನರ್, ಮಗನ ವಿರುದ್ಧ ಕೌಂಟರ್ ಮೇಲೆ ಕೌಂಟರ್: ಏಕವಚನದಲ್ಲೇ ಎಸ್ ಎಸ್ ಎಂ ವಿರುದ್ಧ ಬೆಂಕಿಯುಗುಳಿದ ಸಿದ್ದೇಶ್ವರ…!

ಕೆಸರು ಗದ್ದೆ ಓಟ, ಕೆಸರು ಗದ್ದೆ ವಾಲಿಬಾಲ್, ಕೆಸರುಗದ್ದೆ ಥ್ರೋ ಬಾಲ್, ಹಗ್ಗ ಜಗ್ಗಾಟ ಆಯೋಜಿಸಲಾಗಿತ್ತು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಖುಷಿ ಖುಷಿಯಿಂದಲೇ ಪಾಲ್ಗೊಂಡರು. ಕೆಸರಿನಲ್ಲಿ ಕುಣಿದು ಕುಪ್ಪಳಿಸಿದರು. ಬಳಿಕ ಮಾತನಾಡಿದ ವಿದ್ಯಾರ್ಥಿನಿಯರು, ನಾವು ಜೀವನದಲ್ಲಿ ಕೆಸರುಗದ್ದೆಯಲ್ಲಿ ಕಾಲಿಟ್ಟಿದ್ದೇ ಕಡಿಮೆ. ಅಂಥಹುದರಲ್ಲಿ ಇಂಥ ಆಟಗಳನ್ನು ನೋಡಿದ್ದು ಕಡಿಮೆ. ಇಂದು ನಾವೇ ಕೆಸರಿನಲ್ಲಿ ಇಳಿದು ಸಂತೋಷ ಪಟ್ಟೆವು. ಇದು ತುಂಬಾನೇ ಖುಷಿ ಕೊಟ್ಟಿತು ಎಂದು ಸಂತಸ ಹಂಚಿಕೊಂಡರು.

ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ.ಮುರುಗೇಶ್ ಅವರ ನೇತೃತ್ವದಲ್ಲಿ ದೇಸೀ ಕ್ರೀಡೆಗಳ ಉತ್ಸವ ನಡೆಯಿತು. ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ವಿನಾಯಕ್ ಪೈಲ್ವಾನ್ ಪಂದ್ಯಾವಳಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಹಾಲಿ ಸದಸ್ಯ ಗಡಿಗುಡಾಳ್ ಮಂಜುನಾಥ್, ಕಾಲೇಜಿನ ವಿದ್ಯಾರ್ಥಿಗಳಿಗೆ ದಾವಣಗೆರೆಯಲ್ಲಿ ಮಳೆಗಾಲದ ಉತ್ಸವ ಆಯೋಜಿಸಿದ್ದು ಇದೇ ಮೊದಲ ಬಾರಿಗೆ ಎಂದು ಅನಿಸುತ್ತಿದೆ. ನಮಗೂ ಇಂಥ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಇದೆ. ಆದ್ರೆ, ಕಾರ್ಯದೊತ್ತಡ ಕಾರಣ ಪಾಲ್ಗೊಳ್ಳಲು ಆಗುತ್ತಿಲ್ಲ. ವಿದ್ಯಾರ್ಥಿಗಳು ಖುಷಿ ಖುಷಿಯಿಂದ ಪಾಲ್ಗೊಂಡಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಬಿ. ಮುರುಗೇಶ್ ಮಾತನಾಡಿ, ವಿದ್ಯಾರ್ಥಿಗಳು ಯಾವಾಗಲೂ ಓದು, ಪಠ್ಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಮಾನಸಿಕ, ದೈಹಿಕ ಹಾಗೂ ಮನಸ್ಸು ಪ್ರಫುಲ್ಲವಾಗಲು ಇಂಥ ಕ್ರೀಡೆಗಳು ಸಹಕಾರಿ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಖುಷಿ ಖುಷಿಯಾಗಿ ಪಾಲ್ಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲಾಗುವುದು. ದೇಶಿಯ ಸೊಬಗು ಎಲ್ಲರಿಗೂ ಗೊತ್ತಾಗಬೇಕು ಎಂಬ ಸದುದ್ದೇಶ ನಮ್ಮದು ಎಂದು
ಹೇಳಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ ಸೇರಿದಂತೆ ಅಧ್ಯಾಪಕರು,ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Exit mobile version