Site icon Kannada News-suddikshana

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಜಾಂಡೀಸ್ ಇಂಜಕ್ಷನ್ ಕೊರತೆ!

ದಾವಣಗೆರೆ

SUDDIKSHANA KANNADA NEWS/ DAVANAGERE/ DATE:13_07_2025

ದಾವಣಗೆರೆ: ಜಿಲ್ಲಾ ಸಾರ್ವಜನಿಕ ಚಿಗಟೇರಿ ಆಸ್ಪತ್ರೆಯಲ್ಲಿ ಜಾಂಡೀಸ್ ರೋಗದ ಇಂಜಕ್ಷನ್ ಕೊರತೆ ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಾಂಡೀಸ್‌ನಿಂದ ಬಳಲುತ್ತಿದ್ದ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ರುದ್ರನಕಟ್ಟೆ ಗ್ರಾಮದ ಸಿದ್ದೇಶ್ (35) ಎಂಬುವರು ಕಳೆದ ಎಂಟು ದಿನಗಳ ಹಿಂದೆ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

READ ALSO THIS STORY: ದಾವಣಗೆರೆಯಲ್ಲಿ ವಾಕಿಂಗ್ ಹೋಗಿದ್ದಾಗ ಹೃದಯಾಘಾತವಾಗಿ ಉದ್ಯಮಿ ಸಾವು: ಸಿಸಿಟಿವಿಯಲ್ಲಿ ಸೆರೆ!

ಅಲ್ಬಾಯಿನ್ ಎಂಬ ಇಂಜಕ್ಷನ್‌ನ್ನು ತುರ್ತು ಕೊಡಬೇಕಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಈ ಇಂಜಕ್ಷನ್ ಇಲ್ಲ. ಹೊರಗಡೆ ತೆಗೆದುಕೊಂಡು ಬನ್ನಿ ಎಂದು ವೈದ್ಯರು ಚೀಟಿ ಬರೆದುಕೊಟ್ಟಿದ್ದಾರೆ. ಹೊರಗಡೆ ಔಷಧಿ ಅಂಗಡಿಯಲ್ಲಿ ಈ ಇಂಜಕ್ಷನ್ ತರಲು ಹೋದಾಗ 5 ಸಾವಿರ ರೂ. ಆಗುತ್ತದೆ ಎಂದಿದ್ದಾರೆ. ಆದರೆ ಇವರ ಬಳಿ ಅಷ್ಟೊಂದು ಹಣವಿಲ್ಲದೆ ವಾಪಸ್ ಬಂದಿದ್ದಾರೆ.

ಇದೇ ಸಮಯಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಕ್ಷೇತ್ರದ ರೋಗಿಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ್ದಾರೆ. ಈ ವೇಳೆ ರೋಗಿಯ ಸಂಬಂಧಿಕರು ಶಾಸಕರ ಬಳಿ ಇಂಜಕ್ಷನ್ ವಿಷಯದ ಬಗ್ಗೆ ಹೇಳಿಕೊಂಡಿದ್ದಾರೆ.

ಕೂಡಲೇ ಔಷಧಿ ಉಗ್ರಾಣದ ಅಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಇಂಜಕ್ಷನ್ ಕೊರತೆ ಬಗ್ಗೆ ವಿಚಾರ ನಡೆಸಿದ್ದಾರೆ. ಆಗ ಅಧಿಕಾರಿ ಈ ಇಂಜಕ್ಷನ್ ಇರಲಿಲ್ಲ. ನಾಳೆ ಬರುತ್ತದೆ, ಕೊಡುವುದಾಗಿ ತಿಳಿಸಿದ್ದಾರೆ. ರೋಗಗಳಿಗೆ ಸಂಬಂಧಿಸಿದ ಔಷಧಿ, ಇಂಜಕ್ಷನ್‌ಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ತುರ್ತಾಗಿ ಇಂತಹ ಸಂದರ್ಭದಲ್ಲಿ ಕೊಡಬೇಕಾದ ಇಂಜಕ್ಷನ್‌ಗಳನ್ನು ಇರಲಿಲ್ಲ ಎಂದರೆ ಬಡ ರೋಗಿಗಳ ಗತಿ ಏನು? ಎಂದು ತರಾಟೆಗೆ ತೆಗೆದುಕೊಂಡರು.

ಹೊರಗಡೆ ಔಷಧಿ ಅಂಗಡಿಗಳಲ್ಲಿ 10 ಅಥವಾ 20 ರೂ.ಗೆ ಸಿಗುವ ಇಂಜಕ್ಷನ್‌ನಾ, ಅದು 5 ಸಾವಿರ ರೂ. ಇದೆ. ಬಡವರಲ್ಲಿ ಇಷ್ಟೊಂದು ಹಣ ಎಲ್ಲಿಂದ ಬರಬೇಕು. ಬಡವರ ಆರೋಗ್ಯ ಸುರಕ್ಷತೆಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಇಲ್ಲಿ ನೋಡಿದರೆ ಅಗತ್ಯವಾಗಿ ಬೇಕಾದ ಇಂಜಕ್ಷನ್ ಇಲ್ಲ. ನಾಳೆ ನಾನು ಭೇಟಿ ನೀಡುವ ಒಳಗೆ ಈ ಇಂಜಕ್ಷನ್ ತರಿಸಿಕೊಟ್ಟಿರಬೇಕೆಂದು ತಾಕೀತು ಮಾಡಿದರು.

ಇದೇ ರೀತಿ ಗಂಭೀರ ಕಾಯಿಲೆಗಳಿಗೆ ಸಂಬಂಧಿಸಿದ ಇಂಜಕ್ಷನ್, ಔಷಧಿಗಳು ಲಭ್ಯವಿರುವುದಿಲ್ಲ. ಉದಾಹರಣೆಗೆ ಸಕ್ಕರೆ ಕಾಯಿಲೆ, ವಿಷ ಸೇವನೆ, ಜಾಂಡೀಸ್ ರೋಗಕ್ಕೆ ಬೇಕಾದ ಇಂಜಕ್ಷನ್, ಔಷಧಿಗಳಿಗೆ ಸಾವಿರಾರು ರೂ. ಬೇಕು. ಬರೀ 10, 20 ರೂ.ಗೆ ಸಿಗುವ ಇಂಜಕ್ಷನ್, ಔಷಧಿಗಳು ಇರುತ್ತವೆ.

ಆದರೆ ಗಂಭೀರ ಕಾಯಿಲೆಗಳಿಗೆ ಬೇಕಾದ ಇಂಜಕ್ಷನ್, ಔಷಧಿ ಇರುವುದಿಲ್ಲ. ಹೀಗಾದರೆ ಬಡ ರೋಗಿಗಳು ಸಾವಿರಾರು ರೂ. ಕೊಟ್ಟ ಹೊರಗಡೆ ತರುವುದಕ್ಕೆ ಆಗುತ್ತದೆಯೇ. ಸಭೆಗಳಲ್ಲಿ ಅಧಿಕಾರಿಗಳು ಎಲ್ಲಾ ಸೌಲಭ್ಯಗಳು ಇವೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ನೋಡಿದರೆ ಈ ರೀತಿ ಕೊರತೆ ಎದ್ದು ಕಾಣುತ್ತದೆ. ಇದು ಹೀಗೆಯೇ ಮುಂದುವರೆದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದು ಶಿಸ್ತುಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರುದ್ರನಕಟ್ಟೆ ಗ್ರಾಪಂ ಅಧ್ಯಕ್ಷ ಸಂಗಪ್ಪ, ಆಲೂರುಹಟ್ಟಿ ಪುಟ್ಟನಾಯ್ಕ್, ಕಾಟೇನಹಳ್ಳಿ ಹನುಮಂತಪ್ಪ, ಅತ್ತಿಗೆರೆ ಮನೋಜ್ ಇನ್ನಿತರರಿದ್ದರು.

Exit mobile version