Home ದಾವಣಗೆರೆ ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಾಯಿ ದರ್ಶನ ಮಾಡಿದ್ದು ನನ್ನ ಪುಣ್ಯ: ಸಿಎಂ ಸಿದ್ದರಾಮಯ್ಯ!
ದಾವಣಗೆರೆನವದೆಹಲಿಬೆಂಗಳೂರು

ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಾಯಿ ದರ್ಶನ ಮಾಡಿದ್ದು ನನ್ನ ಪುಣ್ಯ: ಸಿಎಂ ಸಿದ್ದರಾಮಯ್ಯ!

Share
Share

SUDDIKSHANA KANNADA NEWS/DAVANAGERE/DATE:04_01_2026

ರಾಯಚೂರು: ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ತಾಯಿಯ ದರ್ಶನವಾಗಿದ್ದು ನನ್ನ ಪುಣ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಶ್ರೀ ಅಂಬಾಮಠದಲ್ಲಿ ಆಯೋಜಿಸಿದ್ದ ಶ್ರೀ ಅಂಬಾ ಮಹೋತ್ಸವ -2026 ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ
ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಈ ಕ್ಷೇತ್ರದಲ್ಲಿ ಸಾಲಗುಂದಾ ಏತನೀರಾವರಿ, ಮುಳ್ಳೂರು ಏತ ನೀರಾವರಿ ಮತ್ತು ವಳಬಳ್ಳಾರಿ ವಿಯರ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ನಾವು ಅಧಿಕಾರಕ್ಕೆ ಬಂದ ಮೇಲೆ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ನಿಗಮಗಳಡಿ ₹176 ಕೋಟಿಗಳನ್ನು ಒದಗಿಸಲಾಗಿದೆ. ಸಾಲಗುಂದಾ ಏತ ನೀರಾವರಿಗೆ ₹71 ಕೋಟಿ, ಮಳ್ಳೂರುಏತ ನೀರಾವರಿಗೆ ₹21 ಕೋಟಿ, ಒಳಬಳ್ಳಾರಿ ಏತ ನೀರಾವರಿಗೆ ₹43 ಕೋಟಿಗೂ ಹೆಚ್ಚು ಅನುದಾನವನ್ನು ಒದಗಿಸಲಾಗಿದೆ. ಹಂಪನಗೌಡ ಬಾದರ್ಲಿ ಅವರು ಈ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತಮವಾಗಿ ಮಾಡುತ್ತಿದ್ದಾರೆ. 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರು ಒದಗಿಸುವ ಪ್ರಯತ್ನದಲ್ಲಿ 30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗಿದೆ. ಉಳಿದ 12 ಲಕ್ಷ ಪ್ರದೇಶಕ್ಕೆ ನೀರು ಒದಗಿಸುವ ಕಾರ್ಯ ವಿವಿಧ ಹಂತಗಳಲ್ಲಿದೆ
ಎಂದರು.

₹431 ಕೋಟಿ ವೆಚ್ಚದಲ್ಲಿ ಪಾಪಯ್ಯ ಟನಲ್ ಮತ್ತು ಕಾಲುವೆ ಅಭಿವೃದ್ಧಿಗೆ ಹಾಗೂ ತುಂಗಭದ್ರಾ 33 ಗೇಟ್ ಗಳನ್ನು ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಜೂನ್ ಒಳಗೆ ಈ ಕೆಲಸವನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಬೆಳೆಗೆ ನೀರು ಒದಗಿಸಲಾಗುವುದು. ಎಷ್ಟೇ ವೆಚ್ಚವಾದರೂ ಹೊಸ ಗೇಟ್ ಗಳನ್ನು ಅಳವಡಿಸಿ ನೀರು ಒದಗಿಸುತ್ತೇವೆ ಎಂದು ಹೇಳಿದರು.

ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವುದು ಅಪ್ಪಟ ಸುಳ್ಳು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ತಡೆ ಉಂಟಾಗಿಲ್ಲ. ಗ್ಯಾರಂಟಿಗಳಿಗೆ ಒಂದು ಲಕ್ಷದ 12 ಸಾವಿರ ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 643 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ಸುಮಾರು 16 ಸಾವಿರ ಕೋಟಿ ವೆಚ್ಚವಾಗಿದೆ. 52,000 ಕೋಟಿ ಗಳನ್ನು ಈ ವರ್ಷ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿಯೇ ಕರ್ನಾಟಕ ಅತಿ ಹೆಚ್ಚು ಒಣ ಭೂಮಿಯನ್ನು ಹೊಂದಿರುವ ಎರಡನೇ ರಾಜ್ಯ. ಆದ್ದರಿಂದ ರಾಜ್ಯದಲ್ಲಿ ಹೆಚ್ಚಿನ ನೀರಾವರಿ ಯೋಜನೆ ಕೈಗೆತ್ತಿಕೊಂಡು ಹಸಿರು ವಲಯ ಮಾಡುವುದು ನಮ್ಮ ಉದ್ದೇಶ. ಸಿಂಧನೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಚುರುಕುಗೊಳಿಸಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಇನ್ನೂ ಹೊರಡಿಸಿಲ್ಲ. 2003 ರಲ್ಲಿಯೇ ಇತ್ಯರ್ಥವಾಗಿ ನಮಗೆ ನ್ಯಾಯ ದೊರಕಿದ್ದರೂ 173 ಟಿಎಂಸಿ ನೀರನ್ನು ಬಳಕೆ ಮಾಡಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯವನ್ನು ಹೇರಲಾಗಿದೆ. ನೀರಾವರಿ ಯೋಜನೆಗಳ ಮೂಲಕ ಆದಷ್ಟು ಶೀಘ್ರವಾಗಿ ಕಟ್ಟಕಡೆಯ ಭಾಗದ ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡುತ್ತೇವೆ. ದೇವಸ್ಥಾನದ ಅಭಿವೃದ್ಧಿಗೆ ಮೊದಲನೇ ಹಂತದಲ್ಲಿ ₹6.30 ಕೋಟಿ ಅನುದಾನದ ಪೈಕಿ ₹2 ಕೋಟಿ ಈಗಾಗಲೇ ವೆಚ್ಚ ಮಾಡಲಾಗಿದೆ. ಉಳಿದ ಹಣವನ್ನೂ ಬಿಡುಗಡೆ ಮಾಡಲಾಗುವುದು. ದೇವಸ್ಥಾನ ಮತ್ತು ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

Share

Leave a comment

Leave a Reply

Your email address will not be published. Required fields are marked *