Site icon Kannada News-suddikshana

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳು ಅಸ್ವಸ್ಥ ಪ್ರಕರಣ: ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲೇನಿದೆ…?

SUDDIKSHANA KANNADA NEWS/ DAVANAGERE/ DATE:28-11-2023

ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಕಾಕನೂರು ಗ್ರಾಮದ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 24 ಮಕ್ಕಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಪೋಷಕರು ದೂರು ಕೊಟ್ಟಿದ್ದಾರೆ. ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ಸಂಜೆ ಸಮಯದಲ್ಲಿ ದಾವಣಗೆರೆ ಸಿಜಿ ಆಸ್ಪತ್ರೆಯಲ್ಲಿ ಮಾರುತೇಶ್ ರವರು ನೀಡಿದ ಹೇಳಿಕೆ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ.

ದೂರಿನಲ್ಲೇನಿದೆ…?

ನನ್ನ ಮಗಳು ಬೃಂದಾ ಎಂ.ಪಿ ಕಾಕನೂರು ಗ್ರಾಮದ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಅಲ್ಲಿಯೇ ಹಾಸ್ಟೆಲ್ ನಲ್ಲಿ ಇದ್ದಳು. ಈ ದಿನ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮಕ್ಕಳು ಅಸ್ವಸ್ಥಗೊಂಡು ಸಂತೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ವಿಚಾರ ತಿಳಿದು ನಾನು ಮಧ್ಯಾಹ್ನ ಸುಮಾರು 1 ಗಂಟೆಗೆ ಆಸ್ಪತ್ರೆಗೆ ಹೋದೆ. ಆಸ್ಪತ್ರೆಯಲ್ಲಿ ನೋಡಲಾಗಿ ನನ್ನ ಮಗಳು ಅಸ್ವಸ್ಥಗೊಂಡು ಚಿಕಿತ್ಸೆಗೆ ದಾಖಲಾಗಿರುವುದು ಕಂಡುಬಂದಿತು.

ಹಾಗೆಯೇ ಸುಮಾರು 24 ಹೆಣ್ಣುಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದು ಕಂಡು ಬಂದಿತು. ನನ್ನ ಮಗಳು ಮಾತನಾಡುವ ಸ್ಥಿತಿಗೆ ಬಂದ ನಂತರ ಅವಳನ್ನು ವಿಚಾರಿಸಲಾಗಿ ಉಪಹಾರ ಸೇವಿಸಿದ ನಂತರ ಅಸ್ವಸ್ಥರಾಗಿದ್ದು,
ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದರು ಎಂದು ತಿಳಿಸಿದಳು.

ಹಾಸ್ಟೆಲ್ ನಲ್ಲಿ ಶುಚಿತ್ವ ಇಲ್ಲದಿರುವುದು ಹಾಗೂ ಕಲುಷಿತ ಆಹಾರ ನೀಡಿಕೆ, ಬೇಜವಾಬ್ದಾರಿಯಿಂದ ಹಾಗೂ ಅಜಾಗರೂಕತೆಂದ ಮಕ್ಕಳಿಗೆ ನೀಡಿದ್ದರಿಂದಲೇ ಮಕ್ಕಳು ಅಸ್ವಸ್ಥರಾಗಲು ಕಾರಣವಾಗಿದೆ. ಇದಕ್ಕೆ ಶಾಲೆಯ ಪ್ರಾಂಶುಪಾಲರಾದ ಮಂಜುನಾಥ, ಹಾಸ್ಟೆಲ್ ವಾರ್ಡನ್ ಆಗಿರುವ ನಸೀಮಾ ಭಾನು ಹಾಗೂ ದಿನಸಿ ಸರಬರಾಜು ಮಾಡುವ ಕಂಟ್ರಾಕ್ಟ‌ರ್, ಇತರರ ಅಜಾಗರೂಕತೆ ಮತ್ತು ಬೇಜವಾಬ್ದಾರಿತನವೇ ಕಾರಣವಾಗಿದೆ.

ನಾನು ಇತರೆ ಪೋಷಕರೊಂದಿಗೆ ಹಾಸ್ಟೆಲ್ ಗೆ ಭೇಟಿ ನೀಡಿದಾಗ ಅಡುಗೆ ಮನೆಯಲ್ಲಿ ಅಶುಚಿತ್ವ, ಆಹಾರ ಪದಾರ್ಥಗಳಲ್ಲಿ ಕ್ರಿಮಿಕೀಟಗಳು ಇರುವುದು ಕಂಡುಬಂದಿರುತ್ತದೆ. ಆದ್ದರಿಂದ ಮಕ್ಕಳಿಗೆ ಕಲುಷಿತ ಮತ್ತು ಕ್ರಿಮಿಕೀಟಗಳು ಇರುವ ಆಹಾರವನ್ನು ಮಕ್ಕಳಿಗೆ ನೀಡಿ, ಅಸ್ವಸ್ಥತೆಗೆ ಕಾರಣವಾಗಿರುವ ಪ್ರಾಂಶುಪಾಲರಾದ ಮಂಜುನಾಥ, ವಾರ್ಡನ್ ನಸೀಮಾ ಭಾನು, ಹಾಗು ದಿನಸಿ ಸರಬರಾಜು ಮಾಡುವ ಕಂಟ್ರಾಕ್ಟ‌ರ್ ಮತ್ತು ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದರು. ಸಂತೇಬೆನ್ನೂರು ಠಾಣೆಯಲ್ಲಿ ನಂ-225/2023 ಕಲಂ-273,337 ಐಪಿಸಿ ಸಹಿ 34 ಐಪಿಸಿ ರಿತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು, ಸಿಜಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬಗ್ಗೆ ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.

Exit mobile version