SUDDIKSHANA KANNADA NEWS/DAVANAGERE/DATE:10_12_2025
ಬೆಳಗಾವಿ: ಬಿಜೆಪಿಯು ಕರ್ನಾಟಕದಲ್ಲಿ ಒಮ್ಮೆಯೂ ಸಹ ಸ್ವಂತ ಬಲದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಬಂದಿರುವ ಇತಿಹಾಸವಿಲ್ಲ. ಆಪರೇಷನ್ ಕಮಲದ ಮೂಲಕ ವಾಮಮಾರ್ಗದಲ್ಲಿ ಅಧಿಕಾರ ಕಬಳಿಸಿಕೊಂಡ ಎರಡೇ ಅವಧಿಗಳಲ್ಲಿ ಒಟ್ಟು ಐದು ಬಾರಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದೆ. ಅವರಲ್ಲಿ ಪೂರ್ಣಾವಧಿ ಆಡಳಿತ ನಡೆಸಬಲ್ಲ ನಾಯಕರ ಕೊರತೆ ಇದೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ವಿಷಯಗಳ ಕುರಿತು ವಿಪಕ್ಷ ನಾಯಕರು ಚರ್ಚೆ ಮಾಡಲು ಸಿದ್ಧರಿದ್ದಾರೆಯೇ? ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬ್ಯಾಂಕ್ವೆಟ್ ಹಾಲ್‌ನಿಂದ ಕಣ್ಣೀರಿಟ್ಟು ಹೊರಟು ಹೋಗಿದ್ದು ಏಕೆ ಎಂಬುದಕ್ಕೆ ಈವರೆಗೂ ಬಿಜೆಪಿ ನಾಯಕರಿಂದ ಉತ್ತರ ಬಂದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗಿನ ಯಾವುದೇ ಗೊಂದಲಗಳನ್ನು ಪರಿಹರಿಸುವುದಕ್ಕೆ ಸಮರ್ಥವಾದ ಹೈಕಮಾಂಡ್ ಇದೆ. ಆದರೆ ಮನೆಯೊಂದು ನೂರು ಬಾಗಿಲಾಗಿರುವ ಬಿಜೆಪಿಯವರು ನಮಗೆ ಪಾಠ ಹೇಳಿಕೊಡಲು ಬರುತ್ತಿದ್ದಾರೆ. ಅವರು ವಿರೋಧ ಪಕ್ಷವಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮೊದಲು ತಮ್ಮಲ್ಲಿನ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.





Leave a comment