Site icon Kannada News-suddikshana

ಇಂದು17ನೇ ಐಪಿಎಲ್‌ ಫೈನಲ್‌: ಪೈಪೋಟಿಗೆ ಹೈದರಾಬಾದ್​-ಕೋಲ್ಕತ್ತಾ ರೆಡಿ ; ಕಿರೀಟ ಯಾರಿಗೆ?

ಚೆನ್ನೈ: ಐಪಿಎಲ್‌ನ 17ನೇ ಆವೃತ್ತಿ ಕೊನೇ ಘಟ್ಟಕ್ಕೆ ತಲುಪಿದೆ. ಭಾನುವಾರ ಚೆನ್ನೈಯಲ್ಲಿ ನಡೆಯಲಿರುವ ಫೈನಲ್‌ ಸಮರದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ಮತ್ತು ಸನ್‌ರೈಸರ್ಸ್‌ ಹೈದ್ರಾಬಾದ್‌ ಮುಖಾಮುಖಿ ಆಗುತ್ತಿವೆ.

ಐಪಿಎಲ್‌ನಲ್ಲಿ ಈ ತಂಡಗಳೆರಡು ಫೈನಲ್‌ನಲ್ಲಿ ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು.

ಕೆಕೆಆರ್‌ ಎರಡು ಸಲ, ಎಸ್‌ಆರ್‌ಎಚ್‌ ಒಮ್ಮೆ ಚಾಂಪಿಯನ್‌ ಆಗಿವೆ. ಡೆಕ್ಕನ್‌ ಚಾರ್ಜರ್ಸ್‌ ತಂಡವನ್ನೂ ಸೇರಿಸಿಕೊಂಡರೆ ಹೈದ್ರಾಬಾದ್‌ ಕೂಡ 2 ಸಲ ಪ್ರಶಸ್ತಿ ಎತ್ತಿದ ಸಾಧನೆಯೊಂದಿಗೆ ಗುರುತಿಸಲ್ಪಡುತ್ತದೆ.

ಕೋಲ್ಕತಾಗೆ ನಾಯಕ ಶ್ರೇಯಸ್‌ ಅಯ್ಯರ್‌ಗಿಂತ ಮಿಗಿಲಾಗಿ ಗುರು ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನ ಹೆಚ್ಚು ಫ‌ಲಪ್ರದವಾಗಿ ಕಂಡಿದೆ. ಇತ್ತ ಹೈದ್ರಾಬಾದ್‌ ಮೇಲೆ ಏಕದಿನ ವಿಶ್ವಕಪ್‌ ವಿಜೇತ ತಂಡದ ಯಶಸ್ವಿ ಕ್ಯಾಪ್ಟನ್‌ ಹಾಗೂ ದುಬಾರಿ ಕ್ರಿಕೆಟಿಗ ಪ್ಯಾಟ್‌ ಕಮಿನ್ಸ್‌ ದೊಡ್ಡ ಮಟ್ಟದ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಇದು ಗುರು ಗಂಭೀರ್‌ ಮತ್ತು ಕ್ಯಾಪ್ಟನ್‌ ಕಮಿನ್ಸ್‌ ನಡುವಿನ ಸಮರವಾಗಿ ಮಾರ್ಪಡುವ ಸಾಧ್ಯತೆಯೇ ಹೆಚ್ಚು. ಅಲ್ಲದೇ ಎರಡೂ ತಂಡಗಳಿಗೆ ಇದು ತಟಸ್ಥ ತಾಣವಾಗಿರುವ ಕಾರಣ ಒತ್ತಡವಿಲ್ಲದೆ ಆಡಬಹುದು ಎಂಬುದೊಂದು ಲೆಕ್ಕಾಚಾರ.

ಈ ಬಾರಿಯ ಐಪಿಎಲ್‌ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಕೆಕೆಆರ್‌ 20 ಅಂಕಗಳೊಂದಿಗೆ ಮೊದಲ ಸ್ಥಾನ ಅಲಂಕರಿಸಿದರೆ, ಹೈದ್ರಾಬಾದ್‌ 17 ಅಂಕ ಹಾಗೂ ಉತ್ತಮ ರನ್‌ರೇಟ್‌ನೊಂದಿಗೆ ದ್ವಿತೀಯ ಸ್ಥಾನಿಯಾಗಿತ್ತು. ಲೀಗ್‌ ಹಂತದಲ್ಲಿ ಎರಡು ಸಲ ಹಾಗೂ ಮೊದಲ ಕ್ವಾಲಿಫೈಯರ್‌ನಲ್ಲಿ ಈ ತಂಡಗಳೆರಡು ಎದುರಾಗಿದ್ದವು. ಮೂರರಲ್ಲೂ ಕೆಕೆಆರ್‌ ಜಯಭೇರಿ ಮೊಳಗಿಸಿತ್ತು. ಹೀಗಾಗಿ ಫೈನಲ್‌ ಫ‌ಲಿತಾಂಶದ ಬಗ್ಗೆ ಎಲ್ಲರೂ ವಿಪರೀತ ಕುತೂಹಲಗೊಂಡಿದ್ದಾರೆ.

ಎರಡೂ ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡಿರುವ ತಂಡಗಳಾಗಿವೆ. ಕೆಕೆಆರ್‌ನಲ್ಲಿ ಸುನೀಲ್‌ ನಾರಾಯಣ್‌, ವೆಂಕಟೇಶ್‌ ಅಯ್ಯರ್‌, ರಸೆಲ್‌, ರಿಂಕು ಸಿಂಗ್‌, ರಮಣ್‌ದೀಪ್‌ ಇದ್ದಾರೆ. ಆದರೆ ಫಿಲ್‌ ಸಾಲ್ಟ್ ಗೈರು ನಿಜಕ್ಕೂ ದೊಡ್ಡ ಹೊಡೆತ. ರೆಹಮಾನುಲ್ಲ ಗುರ್ಬಾಜ್‌ ಫೈನಲ್‌ ಹಣಾಹಣಿಯಲ್ಲಿ ಈ ಸ್ಥಾನವನ್ನು ತುಂಬಲು ಎಷ್ಟರ ಮಟ್ಟಿಗೆ ಯಶಸ್ವಿಯಾದಾರು ಎಂಬುದೊಂದು ಪ್ರಶ್ನೆ.

ಹೈದ್ರಾಬಾದ್‌ ಬ್ಯಾಟಿಂಗ್‌ ಸರದಿಯುದ್ದಕ್ಕೂ ಹೊಡಿಬಡಿ ಆಟಗಾರರದೇ ದರ್ಬಾರು. ಹೆಡ್‌, ಅಭಿಷೇಕ್‌ ಶರ್ಮ, ತ್ರಿಪಾಠಿ, ಕ್ಲಾಸೆನ್‌, ನಿತೀಶ್‌ ರೆಡ್ಡಿ, ಅಬ್ದುಲ್‌ ಸಮದ್‌ ಇಲ್ಲಿನ ಬ್ಯಾಟಿಂಗ್‌ ಹೀರೋಗಳು. ಇಲ್ಲಿ ನಿಂತು ಆಡುವ ಆಟಗಾರರೇ ಇಲ್ಲ. ಆದ್ದರಿಂದಲೇ ಹೈದ್ರಾಬಾದ್‌ ಐಪಿಎಲ್‌ನಲ್ಲಿ ಅತ್ಯಧಿಕ ಮೊತ್ತದ ದಾಖಲೆಯನ್ನು ನಿರ್ಮಿಸಿದ್ದು.

ಆದರೆ ಕೆಕೆಆರ್‌ ಮತ್ತು ರಾಜಸ್ಥಾನ್‌ ಎದುರಿನ ಎರಡೂ ಕ್ವಾಲಿಫೈಯರ್‌ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿಯೂ ದೊಡ್ಡ ಮೊತ್ತ ಪೇರಿಸಲು ಹೈದ್ರಾಬಾದ್‌ಗೆ ಸಾಧ್ಯವಾಗಿರಲಿಲ್ಲ ಎಂಬುದನ್ನು ಗಮನಿಸಬೇಕು. ಕೆಕೆಆರ್‌ ವಿರುದ್ಧ 19.3 ಓವರ್‌ಗಳಲ್ಲಿ 159ಕ್ಕೆ ಆಲೌಟ್‌ ಆದರೆ, ರಾಜಸ್ಥಾನ್‌ ವಿರುದ್ಧ 9ಕ್ಕೆ 175 ರನ್‌ ಮಾಡಿತ್ತು. ಫೈನಲ್‌ನಲ್ಲಿ ಇದಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅಗತ್ಯ.

ಎರಡೂ ತಂಡಗಳ ಬೌಲಿಂಗ್‌ ಬಲಿಷೃವೇನೋ ನಿಜ, ಆದರೆ ಕೆಕೆಆರ್‌ ಬೌಲಿಂಗ್‌ ಹೆಚ್ಚು ವೈವಿಧ್ಯಮಯ. ವೇಗಕ್ಕೆ ಸ್ಟಾರ್ಕ್‌, ಅರೋರಾ, ರಾಣಾ; ಸ್ಪಿನ್ನಿಗೆ ಸುನೀಲ್‌ ನಾರಾಯಣ್‌, ವರುಣ್‌ ಚಕ್ರವರ್ತಿ ಇದ್ದಾರೆ. ಹೈದ್ರಾಬಾದ್‌ ಕಮಿನ್ಸ್‌, ನಟರಾಜನ್‌, ಭುವನೇಶ್ವರ್‌, ಉನಾದ್ಕಟ್‌ ಅವರನ್ನು ನೆಚ್ಚಿಕೊಂಡಿದೆ. ಸ್ಪಿನ್ನಿಗೆ ಶಹಬಾಜ್‌ ಅಹ್ಮದ್‌ ಮಾತ್ರ ಎನ್ನಬಹುದು. ರಾಜಸ್ಥಾನ್‌ ವಿರುದ್ಧ ಇವರ ಬೌಲಿಂಗ್‌ ಹೆಚ್ಚು ಪರಿಣಾಮಕಾರಿ ಆಗಿತ್ತು.

ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ದುಬಾರಿ ಆಟಗಾರರಿಬ್ಬರು ಫೈನಲ್‌ನಲ್ಲಿ ಮುಖಾಮುಖೀ ಆಗುತ್ತಿರುವುದೊಂದು ಸ್ವಾರಸ್ಯ. ಇವರಿಬ್ಬರೂ ಆಸ್ಟ್ರೇಲಿಯದವರು ಮತ್ತು ಘಾತಕ ವೇಗಿಗಳೆಂಬುದು ಮತ್ತೂಂದು ಸ್ವಾರಸ್ಯ. ಒಬ್ಬರು ಪ್ಯಾಟ್‌ ಕಮಿನ್ಸ್‌, ಮತ್ತೂಬ್ಬರು ಮಿಚೆಲ್‌ ಸ್ಟಾರ್ಕ್‌. ಪ್ಯಾಟ್‌ ಕಮಿನ್ಸ್‌ ಅವರನ್ನು ಹೈದ್ರಾಬಾದ್‌ 20.5 ಕೋಟಿ ರೂ.ಗೆ ಖರೀದಿಸಿ ನಾಯಕನನ್ನಾಗಿ ನೇಮಿಸಿತು. ಸ್ಟಾರ್ಕ್‌ ಖರೀದಿಗೆ ಕೆಕೆಆರ್‌ ಬರೋಬ್ಬರಿ 24.75 ಕೋಟಿ ರೂ. ಸುರಿದಿತ್ತು.

ಅಂಕಣಗುಟ್ಟು:

ಫೈನಲ್‌ ಪಂದ್ಯಕ್ಕೆ ಚೆನ್ನೈಯ ಎಂ.ಎ. ಚಿದಂಬರಂ ಮೈದಾನದ ಪಿಚ್‌ ಮೇಲ್ಪದರವನ್ನು ಕೆಂಪು ಮಣ್ಣಿನಿಂದ ನಿರ್ಮಿಸಲಾಗಿದೆ ಎಂದು ವರದಿಗಳು ಹೇಳಿವೆ. ಹೀಗಾಗಿ, ಈ ಪಿಚ್‌ ಮುಂಬೈ ಪಿಚ್‌ನ ರೀತಿಯಲ್ಲಿ ವರ್ತಿಸುವುದನ್ನು ನಿರೀಕ್ಷಿಸಲಾಗಿದೆ. ಇದರರ್ಥ ಪಂದ್ಯದ ವೇಳೆ ಹೆಚ್ಚು ರನ್‌ ಬರುವ ಸಾಧ್ಯತೆಯಿದೆ. ಈ ಮೈದಾನದಲ್ಲಿ ಸರಾಸರಿ ಸ್ಕೋರ್‌164. ಇಲ್ಲಿ 2ನೇ ಇನಿಂಗ್ಸ್‌ನಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಕಡಿಮೆಯಿರುವುದರಿಂದ ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವುದು ನಿರೀಕ್ಷಿತ.

ಕೋಲ್ಕತಾ-ಹೈದ್ರಾಬಾದ್‌ ಮುಖಾಮುಖಿ:

ಒಟ್ಟು ಪಂದ್ಯ: 27

ಕೋಲ್ಕತಾ: 18

ಹೈದ್ರಾಬಾದ್‌: 9

ಸಂಭಾವ್ಯ ತಂಡಗಳು:

ಕೋಲ್ಕತಾ: ಗುರ್ಬಾಜ್‌, ಸುನೀಲ್‌, ವೆಂಕಟೇಶ್‌, ಶ್ರೇಯಸ್‌, ನಿತೀಶ್‌, ರಸೆಲ್‌, ರಿಂಕು, ರಮಣ್‌ದೀಪ್‌, ಸ್ಟಾರ್ಕ್‌, ಹರ್ಷಿತ್‌, ವರುಣ್‌.

ಹೈದ್ರಾಬಾದ್‌: ಹೆಡ್‌, ಅಭಿಷೇಕ್‌, ರಾಹುಲ್‌, ನಿತೀಶ್‌, ಮಾರ್ಕ್ರಮ್‌, ಕ್ಲಾಸೆನ್‌, ಶಹಬಾಜ್‌, ಸಮದ್‌, ಕಮಿನ್ಸ್‌, ಭುವನೇಶ್ವರ್‌, ಉನಾದ್ಕಟ್‌.

ಚೆನ್ನೈನಲ್ಲಿ ಮಳೆ ಸಾಧ್ಯತೆ ಕಡಿಮೆ:

ಚೆನ್ನೈನಲ್ಲಿ ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದಾ ಎಂಬ ಆತಂಕವಿದೆ. ಪ.ಬಂಗಾಳದಲ್ಲಿ ವಾಯುಭಾರ ಕುಸಿತವಾಗಿ ರೀಮಲ್‌ ಚಂಡಮಾರುತ ಎದ್ದಿರುವುದರಿಂದ, ಅದು ಚೆನ್ನೈಗೆ ಪಂದ್ಯದ ವೇಳೆ ಅಪ್ಪಳಿಸಿ ಅಡ್ಡಿ ಮಾಡಬಹುದಾ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ. ಐಎಂಡಿ ಪ್ರಕಾರ ಭಾನುವಾರ ಪ.ಬಂಗಾಳಕ್ಕೆ ರೀಮಲ್‌ ಅಪ್ಪಳಿಸುತ್ತದೆ. ಅದು ತಮಿಳುನಾಡು ಪ್ರವೇಶಿಸಲು ಇನ್ನೂ ಸಮಯ ಬೇಕಿರುವುದರಿಂದ ಐಪಿಎಲ್‌ ಫೈನಲ್‌ಗೆ ಅಡ್ಡಿಯಿಲ್ಲ ಎಂದು ಅಂದಾಜಿಸಲಾಗಿದೆ. ಚೆನ್ನೈಯಲ್ಲಿ ಮಳೆ ಸಾಧ್ಯತೆ ಕೇವಲ ಶೇ.10ರಷ್ಟಿದೆ ಎಂದು ವರದಿಗಳು ಹೇಳಿವೆ.

ಸ್ಥಳ: ಎಂ.ಎ. ಚಿದಂಬರಂ ಮೈದಾನ, ಚೆನ್ನೈ

ಪಂದ್ಯಾರಂಭ: ರಾ.7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ (ಟೀವಿ), ಜಿಯೋ ಸಿನಿಮಾ (ಆಯಪ್‌)

Exit mobile version