Site icon Kannada News-suddikshana

IPL 2024 | ಕಪ್‌ ಗೆದ್ದು ಸಂಭ್ರಮಿಸಿದ ಕೆಕೆಆರ್‌; ಇವರೇ ನೋಡಿ ಕೋಲ್ಕತಾದ ರಿಯಲ್ ಗೇಮ್‌ ಚೇಂಜರ್..!

ಚೆನ್ನೈ: 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯವು ಜಿದ್ದಾಜಿದ್ದಿನಿಂದ ಕೂಡಿರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಏಕಪಕ್ಷೀಯವಾಗಿ ನಡೆದ ಫೈನಲ್‌ನಲ್ಲಿ ಕೆಕೆಆರ್ ತಂಡವು ಭರ್ಜರಿ ಜಯ ಸಾಧಿಸಿ ಮೂರನೇ ಬಾರಿ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿತು.

ಇನ್ನು ಐಪಿಎಲ್‌ನ ಇತಿಹಾಸದಲ್ಲೇ ಇಂಥ ಮಾರಕ ಬೌಲಿಂಗ್‌ ಪಡೆಯನ್ನು ಯಾರೂ ನೋಡಿರಲಿಲ್ಲ. ಕೆಕೆಆರ್‌ನ ಯಶಸ್ಸಿನಲ್ಲಿ ಬೌಲರ್‌ಗಳ ಕೊಡುಗೆ ಅಗಾಧವಾಗಿದೆ. ಹರಾಜಿನಲ್ಲಿ ಬಹಳ ಲೆಕ್ಕಾಚಾರದೊಂದಿಗೆ ಪ್ರತಿಭಾನ್ವಿತ ಬೌಲರ್‌ಗಳನ್ನು ಖರೀದಿಸಿದ್ದ ಕೆಕೆಆರ್‌ಗೆ ಫಲ ದೊರೆಯಿತು. ಈ ಆವೃತ್ತಿಯಲ್ಲಿ ವರುಣ್‌ ಚಕ್ರವರ್ತಿ 21, ಹರ್ಷಿತ್‌ ರಾಣಾ ಹಾಗೂ ಆ್ಯಂಡ್ರೆ ರಸೆಲ್‌ ತಲಾ 19, ಸುನಿಲ್‌ ನರೈನ್‌ ಹಾಗೂ ಮಿಚೆಲ್‌ ಸ್ಟಾರ್ಕ್‌ ತಲಾ 17, ವೈಭವ್ ಅರೋರಾ 11 ವಿಕೆಟ್‌ ಕಬಳಿಸಿದರು.

ಯಶಸ್ಸಿನ ಹಿಂದಿದ್ದಾರೆ ಬೌಲಿಂಗ್‌ ಕೋಚ್‌ ಭರತ್‌!

ಟೀಂ ಇಂಡಿಯಾಗೆ ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಸಿರಾಜ್‌ರಂಥ ವಿಶ್ವ ಶ್ರೇಷ್ಠ ವೇಗಿಗಳನ್ನು ರೂಪಿಸಿಕೊಟ್ಟ ಭರತ್‌ ಅರುಣ್‌, ಕೆಕೆಆರ್‌ ಚಾಂಪಿಯನ್‌ ಆಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. 2022ರಲ್ಲಿ ತಂಡದ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡ ಭರತ್‌, ಹರ್ಷಿತ್‌ ರಾಣಾ, ವೈಭವ್‌ ಅರೋರಾರಂತಹ ಪ್ರತಿಭಾನ್ವಿತ ದೇಸಿ ವೇಗಿಗಳನ್ನು ವಿಶ್ವದ ಅತಿಕಠಿಣ ಟಿ20 ಲೀಗ್‌ಗೆ ಸಿದ್ಧಗೊಳಿಸಿದ್ದಲ್ಲದೇ, ಸ್ಟಾರ್ಕ್‌, ನರೈನ್‌, ರಸೆಲ್‌ರಂಥ ಅನುಭವಿಗಳನ್ನು ತಂಡದ ಅಗತ್ಯತೆಗೆ ತಕ್ಕಂತೆ ಬಳಸಿಕೊಂಡರು

6 ಬಾರಿ ಎದುರಾಳಿಯನ್ನು ಆಲೌಟ್‌ ಮಾಡಿದ ಕೆಕೆಆರ್‌!

2024ರ ಐಪಿಎಲ್‌ನಲ್ಲಿ ಕೆಕೆಆರ್‌ ಎದುರಾಳಿರನ್ನು ಒಟ್ಟು 6 ಬಾರಿ ಆಲೌಟ್‌ ಮಾಡಿತು. ಉಳಿದೆಲ್ಲಾ ತಂಡಗಳು ಸೇರಿ ಒಟ್ಟಾರೆ 11 ಬಾರಿ ಎದುರಾಳಿಗಳನ್ನು ಆಲೌಟ್‌ ಮಾಡಿವೆ. ಇದೊಂದೇ ಅಂಕಿ-ಅಂಶ ಸಾಕು ಕೆಕೆಆರ್‌ನ ಬೌಲಿಂಗ್‌ ಎಷ್ಟು ಬಲಿಷ್ಠವಾಗಿತ್ತು ಎನ್ನುವುದನ್ನು ಹೇಳಲು.

Exit mobile version