Home ದಾವಣಗೆರೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅರಿವು, ಜಾಗೃತಿ ಮೂಡಿಸಬೇಕು: ಜಿ. ಬಿ. ವಿನಯ್ ಕುಮಾರ್ ಅಭಿಮತ
ದಾವಣಗೆರೆಬೆಂಗಳೂರು

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅರಿವು, ಜಾಗೃತಿ ಮೂಡಿಸಬೇಕು: ಜಿ. ಬಿ. ವಿನಯ್ ಕುಮಾರ್ ಅಭಿಮತ

Share
ಸ್ಪರ್ಧಾತ್ಮಕ ಪರೀಕ್ಷೆ
Share

ದಾವಣಗೆರೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯುಪಿಎಸ್ ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ತುಂಬಾನೇ ಕಡಿಮೆ ಇದೆ. ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಓದಿ ಬಂದವರು ಡಿಸಿ, ಸಿಇಒ ಆಗಿ ಕರ್ತವ್ಯ ನಿರ್ವಹಿಸುವುದಕ್ಕೂ ಹಳ್ಳಿ ಮಕ್ಕಳು ಇಂಥ ಸ್ಥಾನಕ್ಕೆ ಹೋದಾಗ ಸ್ಪಂದಿಸುವ ರೀತಿಗೂ ಭಾರೀ ವ್ಯತ್ಯಾಸ ಇದೆ. ಹಾಗಾಗಿ, ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಆಯ್ಕೆ ಮಾಡಿಕೊಂಡು ಯಶಸ್ಸು ಗಳಿಸಿ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಸಲಹೆ ನೀಡಿದರು.

ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕರ್ನಾಟಕ ಸರ್ಕಾರಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಶ್ರೀ ಶ್ರೀ ಶಿವಲಿಂಗೇಶ್ವರಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಹಾಗೂ ಕೋಶ-ಉದ್ಯೋಗ ಭರವಸೆ ಕೋಶ ಮತ್ತು ಸ್ವಯಂ ಉದ್ಯೋಗ ಕ್ಲಬ್‌ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಬಗೆಗಿನ ಅರಿವು-ನೆರವು ಕಾರ್ಯಾಗಾರದಲ್ಲಿ “ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಹೇಗೆ” ಎಂಬ ವಿಷಯದ ಕರಿತು ಅವರು ಮಾತನಾಡಿದರು.

ಸಂವೇದನಾಶೀಲ ಆಡಳಿತ:

ನಗರ ಪ್ರದೇಶದಲ್ಲಿನ ಓದುವ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ, ಅರಿವು, ಜಾಗೃತಿ ಇರುತ್ತದೆ. ಹಳ್ಳಿ ಪ್ರದೇಶದ ಮಕ್ಕಳಿಗೆ ಈ ಬಗ್ಗೆ ಅರಿವಿನ ಕೊರತೆ ಜೊತೆಗೆ ಆರ್ಥಿಕವಾಗಿ ಸಮಸ್ಯೆಗಳು ಬರುತ್ತವೆ. ಹಾಗೆಂದ ಮಾತ್ರಕ್ಕೆ ಎದೆಗುಂದದೆೇ ಧೈರ್ಯವಾಗಿ ಮುನ್ನುಗ್ಗುವ ಛಾತಿ ಬೆಳೆಸಿಕೊಂಡರೆ ಅತ್ಯುನ್ನತ ಸಾಧನೆ ಜೊತೆಗೆ ಇಡೀ ಊರು, ಜಿಲ್ಲೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಳ್ಳುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಠ ಬಿಡದ ತ್ರಿವಿಕ್ರಮರಂತೆ ಸಾಧನೆಯತ್ತ ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದರು.

ಅರಿವಿನ ಕೊರತೆ:

ಆಡಳಿತಾತ್ಮಕ ಕ್ಷೇತ್ರಕ್ಕೆ ಬಡವರ ಮಕ್ಕಳು ಬರಬೇಕು. ನಿಮಗೆ ಶೋಷಣೆ, ಬಡತನದ ಅರಿವಿದೆ. ಹಸಿವು, ಹಳ್ಳಿ ವಾತಾವರಣದ ಬಗ್ಗೆ ಗೊತ್ತಿರುತ್ತದೆ. ಸುತ್ತಮುತ್ತಲು ಅನ್ಯಾಯವನ್ನೂ ನೋಡಿರುತ್ತೀರಿ. ದೇಶದ ಅತ್ಯುನ್ನತ ಕಾಲೇಜುಗಳಲ್ಲಿ ಓದಿ ಬಂದು ಡಿಸಿ, ಸಿಇಒ ಆದವರಿಗೆ ಬಡವರು, ಶೋಷಿತರ ಕಷ್ಟ ಗೊತ್ತಿರುವುದಿಲ್ಲ. ಯಾಕೆಂದರೆ ಅವರು ಅದನ್ನು ಅನುಭವಿಸಿಯೂ ಇರುವುದಿಲ್ಲ. ಶ್ರೀಮತರ ಮಕ್ಕಳು ಉನ್ನತ ಅಧಿಕಾರಿಗಳಾಗಿ ಸಾರ್ವಜನಿಕರಿಗೆ ಸ್ಪಂದಿಸುವ ರೀತಿಗೂ ನೀವು ಸ್ಪಂದಿಸುವ ರೀತಿಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ನಾವು ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ನೀವು ಮುಂದೆ ಬರಬೇಕು. ಈ ಸಾಧನೆ ಮಾಡುವ ಕನಸು ನನಸಾಗಿಸಿಕೊಳ್ಳಲು ಶ್ರಮ ಬೇಕೇ ಬೇಕು ಎಂದು ಹೇಳಿದರು.

ಮಿಷನ್ 100 (Mission 100):

ಜ್ಞಾನ ಸಂಪಾದನೆ ಮಾಡಿ. ಬಹಳ ಧೈರ್ಯದಿಂದ ಮುನ್ನುಗ್ಗಿ. ಬೆಂಬಲಿಸಲು ನಾನು ಮತ್ತು ನಮ್ಮ ಸಂಸ್ಥೆ ಇನ್ ಸೈಟ್ಸ್ ಇದೆ. ನಮ್ಮ ಸಂಸ್ಥೆಯಿಂದ ಮಿಷನ್ 100 ಯೋಜನೆ ರೂಪಿಸಿದ್ದೇವೆ. ಅಂದರೆ ವರ್ಷದಲ್ಲಿ ನೂರು ಮಂದಿ ಐಎಎಸ್ ಟಾಪರ್ ಆಗಬೇಕು. ಈ ನಿಟ್ಟಿನಲ್ಲಿ ಸಜ್ಜುಗೊಳಿಸಬೇಕೆಂಬ ಕನಸು ಕಂಡಿದ್ದೇವೆ. ದೊಡ್ಡ ಕಾಲೇಜುಗಳಲ್ಲಿ ಓದಿದವರು ಬರುತ್ತಾರೆ, ಕೆಲವೇ ಕೆಲ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಅಭ್ಯಾಸ ಮಾಡಿದವರು ತರಬೇತಿಗೆ ಸೇರುತ್ತಾರೆ. ಆಗ ಹಲವು ರೀತಿಯಲ್ಲಿ ಸಮಸ್ಯೆಗಳಾಗುತ್ತವೆಂಬ ಕಾರಣಕ್ಕೆ ಹಿಂಜರಿಯಬೇಡಿ. ಮುನ್ನುಗ್ಗಿ, ಹಿಡಿದ ಕಾರ್ಯ ಮುಗಿಸುತ್ತೇವೆಂದುಕೊಂಡು ಮುಂದೆ ಬಂದರೆ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸಿದರು.

ಛಲ ಮತ್ತು ಧೈರ್ಯ:

ಉದ್ಯೋಗ ಕ್ಷೇತ್ರದಲ್ಲಿ ಅನಿಶ್ಚಿತತೆ ಕಾಡುತ್ತಿದೆ. ಎಷ್ಟೋ ಕುಲಕಸುಬು, ಮೆಕಾನಿಕಲ್ ಸೇರಿದಂತೆ ಅನೇಕ ಕ್ಷೇತ್ರದ ಉದ್ಯೋಗಗಳು ಕಡಿಮೆಯಾಗುತ್ತಿವೆ. ಸರ್ಕಾರಿ ಕೆಲಸ ಸಿಕ್ಕರೆ ಸಾಕು ಜೀವನ ನಡೆಸಬಹುದು ಎಂಬ ಕನಸು ಎಲ್ಲರದ್ದು. ಇದಕ್ಕಿಂತ ಮಿಗಿಲಾದ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಆಲೋಚಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಜಿ. ಅಮೃತೇಶ್ವರ ಅವರು ವಹಿಸಿದ್ದರು. ಉದ್ಯೋಗಕೋಶದ ಸಂಚಾಲಕಿ ಡಾ. ಮಂಜುಳಾ, ರೂಸಾ ಸಂಚಾಲಕ ಡಾ. ನಾಗರಾಜು ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *