SUDDIKSHANA KANNADA NEWS/ DAVANAGERE/ DATE: 12-05-2023
ದಾವಣಗೆರೆ (DAVANAGERE): ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಜೋರಾಗಿ ಪ್ರಚಾರ ನಡೆಸಿದ್ದಾರೆ. ಜಗಳೂರಿನಲ್ಲಿ ಹೆಚ್. ಪಿ. ರಾಜೇಶ್, ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಮಾಯಕೊಂಡ ಕ್ಷೇತ್ರದಲ್ಲಿ ವಾಗೀಶ್ ಸ್ವಾಮಿ ಪತ್ನಿ ಪುಷ್ಪಾ ವಾಗೀಶ್ ಸ್ವಾಮಿ ಕಣಕ್ಕಿಳಿದಿದ್ದು, ಈ ಮೂವರು ಗೆಲ್ಲುವ ಸಾಧ್ಯತೆ ಇದೆ.
ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸ್ಥಳೀಯ ಆಪ್ತರ ಮೂಲಕ ಈ ಮೂವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಒಂದು ವೇಳೆ ಜಯ ಗಳಿಸಿದರೆ ತಮ್ಮ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ
ಎಂದು ಮೂಲಗಳು ತಿಳಿಸಿವೆ.
ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಚೆನ್ನಾಗಿತ್ತು. ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಜೈಲು ಸೇರುತ್ತಿದ್ದಂತೆ ಎಲ್ಲವೂ ಉಲ್ಟಾ ಪಲ್ಟಾ ಆಯ್ತು. ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿತು. ಮಾಡಾಳ್ ಮಲ್ಲಿಕಾರ್ಜುನ್ ಅವರಿಗಾದರೂ
ಬಿಜೆಪಿ ಟಿಕೆಟ್ ನೀಡುವಂತೆ ಕೇಳಿಕೊಳ್ಳಲಾಗಿತ್ತಾದರೂ ಲಂಚದ ಹಣ ಪಡೆದ ಆರೋಪದಲ್ಲಿ ಜೈಲು ಸೇರಿದ್ದ ಕಾರಣ ಕೇಸರಿ ಪಡೆ ನಿರಾಕರಿಸಿತು. ಆ ಬಳಿಕ ಬಂಡಾಯ ಅಭ್ಯರ್ಥಿಯಾಗಿ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರನಾಗಿ ಕಣಕ್ಕಿಳಿದರು.
ಆ ಬಳಿಕ ಬಿಜೆಪಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿತ್ತು.
ಒಂದು ವೇಳೆ ಬಿಜೆಪಿಯು ಅಧಿಕಾರ ಹಿಡಿಯಲು ಕೆಲ ಶಾಸಕರು ಬೇಕಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದರೂ, ಕಾಂಗ್ರೆಸ್ ಸಮೀಕ್ಷೆಗಳ ಪ್ರಕಾರ ಅಧಿಕಾರ ಹಿಡಿಯುವ ಸನಿಹದಲ್ಲಿದೆ. ಈ ಕಾರಣಕ್ಕಾಗಿ ಮಾಡಾಳ್ ಮಲ್ಲಿಕಾರ್ಜುನ್, ವಾಗೀಶ್ ಸ್ವಾಮಿ
ಹಾಗೂ ಹೆಚ್. ಪಿ. ರಾಜೇಶ್ ರ ಸಂಪರ್ಕದಲ್ಲಿದ್ದಾರೆ.
ಹೆಚ್. ಪಿ. ರಾಜೇಶ್ ಜಗಳೂರಿನಿಂದ ಸ್ಪರ್ಧೆ ಬಯಸಿ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ದೇವೇಂದ್ರಪ್ಪರಿಗೆ ಬಿ ಫಾರಂ ನೀಡಿತು. ಇದರಿಂದ ಮುನಿಸಿಕೊಂಡಿದ್ದ ಹೆಚ್. ಪಿ. ರಾಜೇಶ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಚುನಾವಣಾ ಪ್ರಚಾರದ ವೇಳೆ ಜನರ ಸಿಂಪಥಿ ಗಳಿಸಿದ್ದ ರಾಜೇಶ್ ಗೆ ಲಿಂಗಾಯತ ಸಮುದಾಯದ ಮುಖಂಡರು ಬಹಿರಂಗವಾಗಿ ಬೆಂಬಲ ನೀಡಿದರು. ಇದೆಲ್ಲವನ್ನೂ ಗಮನಿಸಿರುವ ಕಾಂಗ್ರೆಸ್ ನಾಯಕರು, ಒಂದು ವೇಳೆ ರಾಜೇಶ್ ಗೆದ್ದರೆ ಪಕ್ಷಕ್ಕೆ ಮರಳಿ ಸೇರಿಸಿಕೊಂಡು ಬೆಂಬಲ ಪಡೆಯಲು ಯತ್ನ ಮುಂದುವರಿಸಿದ್ದಾರೆ.
ಇನ್ನು ಬೇಡರ ಜಂಗಮ ಜಾತಿ ಪ್ರಮಾಣ ಪತ್ರ ಪಡೆದು ತನ್ನ ಪತ್ನಿಯನ್ನು ವಾಗೀಶ್ ಸ್ವಾಮಿ ಅವರು ಮಾಯಕೊಂಡ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ಸ್ಪರ್ಧೆ ಜೋರಾಗಿದೆ. ಒಂದು ವೇಳೆ ಪುಷ್ಪಾ ವಾಗೀಶ್ ಸ್ವಾಮಿ ಗೆದ್ದರೆ ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ವಾಗೀಶ್ ಸ್ವಾಮಿ ಅವರು, ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದರು. ನಾಮಪತ್ರ ಸಲ್ಲಿಸಿದ್ದರು. ಆದ್ರೆ, ನಾಮಪತ್ರ ಪರಿಶೀಲನೆ ವೇಳೆ ತಿರಸ್ಕಾರಗೊಂಡಿತ್ತು. ಆ ಬಳಿಕ ಅವರ ಪತ್ನಿ ಪುಷ್ಪಾ ವಾಗೀಶ್ ಸ್ವಾಮಿ ಅವರ ನಾಮಪತ್ರ ಅಂಗೀಕರವಾದ ಬಳಿಕ ಸ್ಪರ್ಧೆಗಿಳಿದರು. ಒಟ್ಟಿನಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಪಕ್ಷೇತರರ ಹವಾ ಜೋರಾಗಿದ್ದು, ಫಲಿತಾಂಶದ ಬಳಿಕ ಗೆಲ್ಲುತ್ತಾರೋ ಅಥವಾ ಸೋಲುತ್ತಾರೋ ಎಂಬುದು ಗೊತ್ತಾಗಲಿದೆ.