Home ದಾವಣಗೆರೆ ಅಮೆರಿಕಾಕ್ಕೆ ಶರಣಾದ ಮೋದಿ, ವ್ಯಾಪಾರ ಒಪ್ಪಂದದಿಂದ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಖಂಡಿತ: ಸಿದ್ದರಾಮಯ್ಯ ಆತಂಕ!
ದಾವಣಗೆರೆನವದೆಹಲಿಬೆಂಗಳೂರು

ಅಮೆರಿಕಾಕ್ಕೆ ಶರಣಾದ ಮೋದಿ, ವ್ಯಾಪಾರ ಒಪ್ಪಂದದಿಂದ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಖಂಡಿತ: ಸಿದ್ದರಾಮಯ್ಯ ಆತಂಕ!

Share
ಸಿದ್ದರಾಮಯ್ಯ
Share

ಬೆಂಗಳೂರು: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ ಮುಖ್ಯವಾಗಿ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಆಗಲಿರುವುದು ಖಂಡಿತ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಎರಡು ದೇಶಗಳ ನಡುವಿನ ಸಂಬಂಧಗಳು ಸಮಾನತೆ ಮತ್ತು ಪರಸ್ಪರ ಗೌರವದ ಬುನಾದಿಯ ಮೇಲೆ ಸ್ಥಾಪನೆಯಾಗ ಬೇಕಾಗುತ್ತದೆ. ಅದು ಒತ್ತಡ, ಬೆದರಿಕೆ ಮತ್ತು ಏಕಪಕ್ಷೀಯ ನೀತಿ-ನಿರ್ಧಾರಗಳ ಹೇರಿಕೆಯಿಂದ ನಡೆಯಬಾರದು. ಆದರೆ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬಂದಿರುವ ವಿಧಿ-ವಿಧಾನಗಳನ್ನು ಗಮನಿಸಿದರೆ ಇದು ಒಡೆಯನ ಅಜ್ಞೆಗೆ ಸೇವಕ ತಲೆಯಾಡಿಸಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಅನ್ಯಾಯವಾಗಿದ್ದರೂ ಮೋದಿ ಸ್ವಾಗತ:

ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತವನ್ನು ಮಣಿಸುವ ಉದ್ದೇಶದಿಂದಲೇ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಯರ್ರಾಬಿರ್ರಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರಿಸಿದ್ದರು. ಈಗ ಅದನ್ನು 25%ರಿಂದ 18%ಕ್ಕೆ ಇಳಿಸಿ ಭಾರತಕ್ಕೆ ಮಹದುಪಕಾರ ಮಾಡಿದಂತೆ ನಾಟಕವಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಭಾರತ ಸೊನ್ನೆಗಿಳಿಸಿದೆ. ಮೇಲ್ನೋಟದಲ್ಲಿಯೇ ಈ ತಾರತಮ್ಯದಿಂದ ಆಗಿರುವ ಅನ್ಯಾಯ ಸ್ಪಷ್ಟವಾಗಿ ಕಾಣುತ್ತಿದ್ದರೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಸ್ವಾಗತಿಸಿರುವುದು ಭಾರತದ 149 ಕೋಟಿ ಜನರಿಗೆ ಮಾಡುತ್ತಿರುವ ಮಹಾದ್ರೋಹವಾಗಿದೆ ಎಂದು ಆರೋಪಿಸಿದ್ದಾರೆ.

ಅಗತ್ಯ ವಸ್ತುಗಳ ದುಬಾರಿ: 

ಸದ್ಯ ಭಾರತ ಶೇಕಡಾ 40ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಲೆಬಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಿಂದ ತೈಲ ಖರೀದಿಯನ್ನು ಕೈಬಿಟ್ಟು ಅಮೆರಿಕ ಮತ್ತು ವೆನಿಜುವೆಲಾ ದೇಶಗಳಿಂದ ತೈಲ ಖರೀದಿಸಲು ಒಪ್ಪಿಕೊಂಡಿರುವುದು ಈ ಒಪ್ಪಂದದ ಮುಖ್ಯಾಂಶವಾಗಿದೆ. ಇದು ಭಾರತದ ಸಂಪೂರ್ಣ ಶರಣಾಗತಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದ್ದು ಅದರ ಪರಿಣಾಮವಾಗಿ ಉಳಿದ ಅಗತ್ಯವಸ್ತುಗಳು ಕೂಡಾ ದುಬಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ರೈತರ ಪಾಲಿನ ಮರಣಶಾಸನ:

ಈ ಒಪ್ಪಂದದಿಂದ ಆಗಲಿರುವ ಸಣ್ಣಪುಟ್ಟ ಲಾಭಗಳನ್ನು ದೊಡ್ಡ ಸಾಧನೆ ಎಂದು ಬಿಂಬಿಸುತ್ತಿರುವ ಕೇಂದ್ರ ಸರ್ಕಾರ ಭಾರತೀಯರಿಗೆ, ಮುಖ್ಯವಾಗಿ ದೇಶದ ರೈತ ಸಮುದಾಯಕ್ಕೆ ಆಗುತ್ತಿರುವ ನಷ್ಟವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ. ಈ ಒಪ್ಪಂದವನ್ನು ಅಮೆರಿಕದ ರೈತ ಸಮುದಾಯ ಒಕ್ಕೊರಲಿನಿಂದ ಸ್ವಾಗತಿಸಿ ಕುಣಿದಾಡುತ್ತಿರುವುದೇ ಈ ಒಪ್ಪಂದ ಭಾರತದ ರೈತರ ಪಾಲಿನ ಮರಣಶಾಸನವಾಗಲಿದೆ ಎಂಬುದಕ್ಕೆ ಸೂಚನೆಯಾಗಿದೆ ಎಂದು ಹೇಳಿದ್ದಾರೆ.

ರೈತರಿಗೆ ತೊಂದರೆ:

ಭಾರತಕ್ಕೆ ಹೋಲಿಸಿದರೆ ಅತೀ ಹೆಚ್ಚಿನ ಪ್ರಮಾಣದ ಸಬ್ಸಿಡಿ ಪಡೆಯುತ್ತಿರುವ ಅಮೆರಿಕದ ರೈತರು ಭಾರತದ ಕೃಷಿ ಉತ್ಪನ್ನಗಳಿಗಿಂತ ಕಡಿಮೆ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಿದೆ. ಈ ಅಪಾಯವನ್ನು ತಪ್ಪಿಸಲಿಕ್ಕಾಗಿಯೇ ಇಲ್ಲಿಯವರೆಗಿನ ಎಲ್ಲ ಸರ್ಕಾರಗಳು ಅಮೆರಿಕದಿಂದ ಆಮದಾಗುತ್ತಿರುವ ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದ ಸುಂಕ ಹೇರುತ್ತಾ ಬಂದಿವೆ. ಈಗ ಈ ಆಮದು ಸುಂಕವನ್ನು ರದ್ದುಗೊಳಿಸದರೆ ದೇಶದ ಮಾರುಕಟ್ಟೆಗಳಲ್ಲಿ ಅಮೆರಿಕದ ಅಗ್ಗದ ದರದ ಆಹಾರಧಾನ್ಯ, ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳು ಲಗ್ಗೆ ಇಡಲಿದೆ.. ಇದರಿಂದ ಭಾರತದ ರೈತರು ದಿವಾಳಿ ಸ್ಥಿತಿ ತಲುಪಲಿದ್ದು, ಅವರಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲದ ಸ್ಥಿತಿ ನಿರ್ಮಾಣವಾಗಬಹುದು ಎಂದಿದ್ದಾರೆ.

ಅಮೆರಿಕಾಕ್ಕೆ ಮೋದಿ ಶರಣಾಗತಿ:

ಸಂಪೂರ್ಣವಾಗಿ ಶರಣಾಗತಿಯಾಗಿರುವ ಈ ಒಪ್ಪಂದಕ್ಕೆ ಭಾರತೀಯರ ಹಿತರಕ್ಷಣೆಯ ಉದ್ದೇಶ ಖಂಡಿತ ಇಲ್ಲ. ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಎದುರಿಸುತ್ತಿರುವ ಮೋದಿಯವರ ಉದ್ಯಮ ಸ್ನೇಹಿತ ಅದಾನಿ ಅವರ ರಕ್ಷಣೆ ಮತ್ತು ಜೆಫ್ರಿ ಎಪ್ಸ್ಟೀನ್ ಫೈಲ್ಸ್ ನಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ಮೋದಿ ಮತ್ತು ಸಂಪುಟದ ಸದಸ್ಯರ ಹೆಸರುಗಳಿಂದಾಗಿ ಸೃಷ್ಟಿಯಾಗಿರುವ ಒತ್ತಡದ ಭಾಗವಾಗಿ ಕೇಂದ್ರ ಸರ್ಕಾರ ದೇಶ ವಿರೋಧಿಯಾಗಿರುವ ಒಪ್ಪಂದಕ್ಕೆ ಒಪ್ಪಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ದುರ್ಬಲವಾಯ್ತು ಭಾರತ:

ಜಾಗತಿಕವಾಗಿ ಭಾರತ ಹಿಂದೆಂದೂ ಇಷ್ಟೊಂದು ದುರ್ಬಲವಾಗಿರಲಿಲ್ಲ. ರಾಜತಾಂತ್ರಿಕವಾಗಿ ಎದುರಾಗುವ ಒತ್ತಡಗಳನ್ನು ಇಲ್ಲಿಯ ವರೆಗಿನ ಎಲ್ಲ ಪ್ರಧಾನಿಗಳು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ ನೆಹರೂ ಅವರ ಅಲಿಪ್ತ ನೀತಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿತ್ತು. ಪ್ರಧಾನಿ ಇಂದಿರಾಗಾಂಧಿಯವರು ದೈತ್ಯ ಅಮೆರಿಕದ ಒತ್ತಡವನ್ನು ಕೂಡಾ ಲೆಕ್ಕಿಸದೆ ಪಾಕಿಸ್ಥಾನವನ್ನು ಮಣಿಸಿದ್ದು ಈಗ ಇತಿಹಾಸವಾಗಿದೆ. ಜಾಗತಿಕವಾಗಿ ಎಲ್ಲ ದೇಶಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದ್ದಾಗ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಿದ್ದ ಡಾ.ಮನಮೋಹನ್ ಸಿಂಗ್ ಅವರು ಹೊಸ ಆರ್ಥಿಕ ಯುಗದ ಪ್ರವರ್ತಕರಾಗಿದ್ದರು ಎಂದು ಹೇಳಿದ್ದಾರೆ.

ಭಾರತಕ್ಕೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚು:

ಆದರೆ ಇಂದು ವಿಶ್ವದಲ್ಲಿ ಭಾರತಕ್ಕೆ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ. ವಿದೇಶಾಂಗ ನೀತಿ ಎಂದರೆ ಭಾಷಣ, ಘೋಷಣೆ, ಕೈಕುಲುಕಾಟ ಮತ್ತು ಸ್ವಪ್ರಚಾರವಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿದುಕೊಂಡಂತಿದೆ. ಚೀನಾ ಮತ್ತು ಅಮೆರಿಕದಂತಹ ದೈತ್ಯ ಶಕ್ತಿಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಭಾರತ ತನ್ನ ಅಸ್ಮಿತೆಯನ್ನು ಸಂಪೂರ್ಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ತಲೆಮೇಲೆ ಕೂರಿಸಿ ಮೆರೆದಾಡಿದ್ದ ಮೋದಿ ಅವರು ಈಗ ಅದೇ ಟ್ರಂಪ್ ರ ಆಜ್ಞಾಪಾಲಕರಾಗುವ ದೈನೇಸಿ ಸ‍್ಥಿತಿಗೆ ಬಂದಿದ್ದು ವಿಷಾದನೀಯ. ಮೋದಿಯವರ 56 ಇಂಚಿನ ಎದೆ ಮತ್ತು ವಿಶ್ವಗುರುವಿನ ಕಿರೀಟವನ್ನು ಟ್ರಂಪ್ ಪ್ರತಿದಿನ ಕುಟ್ಟಿ ಪುಡಿ ಮಾಡುತ್ತಿದ್ದಾರೆ ಎಂದಿದ್ದಾರೆ.

ಗೌರವ ಉಳಿಸಿಕೊಳ್ಳಿ ಮೋದಿ:

ವಿದೇಶಾಂಗ ನೀತಿಯಿಂದ ಹಿಡಿದು ಆರ್ಥಿಕ ಮತ್ತು ಸಾಮಾಜಿಕ ನೀತಿಯ ವರೆಗೂ ಎಲ್ಲ ರಂಗಗಳಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿರುವ ಪ್ರಧಾನಿ ಮೋದಿಯವರು ರಾಜೀನಾಮೆ ಕೊಟ್ಟು ದೇಶದ ಮತ್ತು ಅಳಿದುಳಿದ ಅವರ ಗೌರವವನ್ನು ಉಳಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *