ದಾವಣಗೆರೆ: ತಂಬಾಕು ತನಿಖಾ ದಾಳಿ ಹೆಚ್ಚಿಸಿ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಹೆಚ್ಚಿನ ದಂಡ ವಿಧಿಸಲು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣವರ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 1445 ಶಾಲೆಗಳ ಪೈಕಿ 642 ಶೈಕ್ಷಣಿಕ ಸಂಸ್ಥೆಗಳು ನೋಂದಾಯಿಸಿ ಕೇವಲ 10% ಪ್ರಗತಿ ಸಾಧಿಸಿದೆ. ಹಾಗಾಗಿ ಶಾಲಾ, ಕಾಲೇಜುಗಳಲ್ಲಿ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಎಂದು ದೃಢೀಕರಿಸಿ ಮುಂದಿನ ದಿನಗಳಲ್ಲಿ ಶೇಕಡಾ.100 ರಷ್ಟು ಟೋಫೆ ತಂತ್ರಾಂಶದಲ್ಲಿ ನೋಂದಾಯಿಸಬೇಕು. ಪ್ರಸ್ತುತ ದಾವಣಗೆರೆ ದಕ್ಷಿಣ ಹಾಗೂ ಉತ್ತರ ವಲಯದ ಶೈಕ್ಷಣಿಕ ಸಂಸ್ಥೆಗಳ ಸಂಖ್ಯೆ ಕಡಿಮೆ ಆಗಿರುವುದನ್ನು ಗಮನಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮುಂದಿನ 10-15 ದಿನಗಳ ಒಳಗೆ ತಾಲ್ಲೂಕವಾರು ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಕಡ್ಡಾಯವಾಗಿ ಟೋಫೆ ತಂತ್ರಾಂಶದಲ್ಲಿ ನೋಂದಣಿ ಮಾಡಲೇಬೇಕು, ಇಲ್ಲವಾದಲ್ಲಿ ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿದರು. ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಲು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ತಂಬಾಕು ಮುಕ್ತ ಗ್ರಾಮಗಳನ್ನು ಗುರುತಿಸುವಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯವರು ಗ್ರಾಮಗಳಲ್ಲಿನ ಮಹಿಳಾ ಪಂಚಾಯತ್ ಅಧ್ಯಕ್ಷರು, ಮಹಿಳಾ ಸ್ವ-ಸಹಾಯ ಸಂಘದವರೊಂದಿಗೆ ಜಾಗೃತಿ ಅಭಿಯಾನ ಕೈಗೊಳ್ಳುವುದು. ಮತ್ತು ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗ್ರಾಮಸ್ಥರುಗಳಲ್ಲಿ ಮನವೊಲಿಸುವಂತೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳಾದ ಡಾ. ಷಣ್ಮುಖಪ್ಪ ಎಸ್. ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಕೆ ನಾಗೇಂದ್ರಪ್ಪ ಎಂ.ಬಿ, ಜಿಲ್ಲಾ ಜಾರಿ ಅಧಿಕಾರಿಗಳಾದ ಡಾ.ರುದ್ರಸ್ವಾಮಿ ಎಂ.ಕೆ, ಡಿಡಿಪಿಐ ಜಿ.ಕೊಟ್ರೇಶ್, ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ ಮತ್ತು ಜಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಆರೋಗ್ಯ ನಿರೀಕ್ಷಕರುಗಳು ಹಾಗೂ ಇತರರು ಭಾಗವಹಿಸಿದರು.





Leave a comment