Site icon Kannada News-suddikshana

ರಂಭಾಪುರಿ ಶ್ರೀಗಳು ಮಾತಿನ ವರಸೆ ಬದಲಿಸದಿದ್ದರೆ ಹೋರಾಟ: ದಲಿತ, ಹಿಂದುಳಿದ ಮಠಾಧೀಶರ ಒಕ್ಕೊಟ ಎಚ್ಚರಿಕೆ!

ರಂಭಾಪುರಿ

SUDDIKSHANA KANNADA NEWS/ DAVANAGERE/ DATE:28_07_2025

ದಾವಣಗೆರೆ: ಜಾತಿಗೊಂದು ಮಠಗಳಿಂದಾಗಿ ಸಮಾಜ ಕಲುಷಿತಗೊಂಡಿದೆ ಎಂಬ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಹೇಳಿಕೆಗೆ ದಲಿತ ಹಿಂದುಳಿದ ಮಠಾಧೀಶರ ಒಕ್ಕೂಟವು ಆಕ್ರೋಶ ವ್ಯಕ್ತಪಡಿಸಿದೆ.

READ ALSO THIS STORY: ದಲಿತ, ಹಿಂದುಳಿದ ಮಠಾಧೀಶರು ನನ್ನ ಮಾತು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಬೇರೆ ಮಠಗಳ ಬಗ್ಗೆ ಯಾರೂ ಮಾತನಾಡಬಾರದು: ಬಾಳೆಹೊನ್ನೂರು ರಂಭಾಪುರಿ ಶ್ರೀ ಸ್ಪಷ್ಟನೆ

ದಾವಣಗೆರೆಯ ಹಳೆಯ ಪ್ರವಾಸಿ ಮಂದಿರದಲ್ಲಿ ವಿವಿಧ ಮಠಾಧೀಶಗಳ ಮಠಾಧೀಶರು ಪತ್ರಿಕಾಗೋಷ್ಠಿ ನಡೆಸಿ ಕೂಡಲೇ ರಂಭಾಪುರಿ ಶ್ರೀಗಳು ಹೇಳಿಕೆ ವಾಪಸ್ ಪಡೆಯಬೇಕು. ಜೊತೆಗೆ ಮುಂದೆ ಈ ರೀತಿಯಾದ ಮಾತು
ಆಡಬಾರದು. ರಂಭಾಪುರಿ ಶ್ರೀಗಳ ಮಾತು ಒಪ್ಪಲು ಸಾಧ್ಯವೇ ಇಲ್ಲ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಜಾತಿ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುವಂಥ ಮಾತನಾಡಿರುವುದು ಅಕ್ಷಮ್ಯ. ಇದನ್ನು ಒಪ್ಪಲು ಸಾಧ್ಯವಿಲ್ಲ
ಎಂದು ಕಿಡಿಕಾರಿದರು.

ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ ಜಾತಿ ಮಠಗಳಿಂದ ಸಮಾಜ ಕಲುಷಿತ ಎಂಬ ಮಾತು ರಂಭಾಪುರಿಶ್ರೀಗಳು ಹೇಳಿರುವುದು ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ ಖಂಡಿಸುತ್ತದೆ. ರಂಭಾಪುರಿ ಶ್ರೀಗಳು ಹಿರಿಯರು. ವಯೋವೃದ್ಧರು. ಯಾಕೆ ಈ ಮಾತು ಆಡಿದರು ಎಂಬುದು ನಮಗೆ ಅರ್ಥ ಆಗುತ್ತಿಲ್ಲ. ಬಹುಷಃ ರಂಭಾಪುರಿ ಶ್ರೀಗಳು ಗಾಜಿನ ಮನೆಯಲ್ಲಿ ಕುಳಿತು ಇನ್ನೊಂದು ಮನೆಗೆ ಕಲ್ಲು ಹೊಡೆಯುತ್ತಿದ್ದಾರೆ ಎಂದು ಕಠೋರವಾಗಿ ಹೇಳುತ್ತಿದ್ದೇನೆ. ಸಾಕಷ್ಟು ಹಿರಿಯರಾಗಿದ್ದು, ಯೋಚನೆ ಮಾಡಿ ಮಾತನಾಡಬೇಕು. ಜಾತಿ ಮಠಗಳಿಂದ ಸಮಾಜ ಕಲುಷಿತ ಎನ್ನೋದು ಯಾವ ಸಮುದಾಯದ ಸ್ವಾಮೀಜಿ ಎಂದು ಬಹಿರಂಗಪಡಿಸಬೇಕೆಂದು ಸವಾಲು ಹಾಕಿದರು.

ಸಂಕುಚಿತ ಮನೋಭಾವನೆಯಿಂದ ಹೊರಬಂದು ವಿಶಾಲ ಸಮಾಜ ನೋಡುವಂತಾಗಬೇಕು. ಕಳೆದ ವಾರದ ಹಿಂದೆ ಈ ಭಾಗದಲ್ಲಿ ಶೃಂಗಸಭೆ ಆಯೋಜನೆ ಮಾಡಿದ್ದರು. ಶೃಂಗಸಭೆಯಲ್ಲಿ ಸೇರಿದವರು ಅವರವರ ಜಾತಿಗಳವರು.
ಸ್ವಂತ ಜಾತಿಗಳ ಸ್ವಾಮೀಜಿ ಆಗಿದ್ದು, ಬೇರೆ ಜಾತಿಗಳ ಸಮಾಜದ ಸ್ವಾಮೀಜಿಗಳು ಕಲುಷಿತಗೊಳಿಸುತ್ತಾರೆ ಎಂಬುದು ಸರಿಯಲ್ಲ. ರಂಭಾಪುರಿ ಶ್ರೀಗಳು ಇದೇ ರೀತಿಯ ಮಾತಿನ ವರಸೆ ಮುಂದುವರಿಸಿದರೆ ಎಲ್ಲಾ ಸಮುದಾಯದ ಸ್ವಾಮೀಜಿಗಳು ದಾವಣಗೆರೆ ಮಾತ್ರವಲ್ಲ, ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜನಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಮಾತನಾಡಿ ಭಾರತ ದೇಶದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಇದೆ. ಯಾವೆಲ್ಲಾ ಸಮುದಾಯಗಳು ಸಮಾಜದ ಮುಖ್ಯವಾಹಿನಿಂದ
ದೂರ ಉಳಿದಿವೆಯೋ ಆ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕೆಂಬ ನಿಟ್ಟಿನಲ್ಲಿ ಸಾಂಸ್ಕೃತಿಕ ನಾಯಕರ ಪೀಠಗಳು ಸ್ಥಾಪಿತವಾಗಿವೆ. ಎಲ್ಲಾ ಸಮುದಾಯದ ಜೊತೆ ಸಾಮರಸ್ಯದ ಜೊತೆ ಬಾಂಧವ್ಯ ಇಟ್ಟುಕೊಂಡಿದ್ದೇವೆ. ಆರೋಗ್ಯಪೂರ್ಣ ಸಮಾಜ ಕಟ್ಟುವುದು ನಮ್ಮೆಲ್ಲರ ಆಶಯ ಎಂದು ಹೇಳಿದರು.

ನಮ್ಮ ನಮ್ಮ ಕಾರ್ಯಕ್ರಮಗಳಲ್ಲಿ ಎಲ್ಲಾ ವರ್ಗದ, ಎಲ್ಲಾ ಸಮುದಾಯದ ನಾಯಕರು ಇರುತ್ತಾರೆ. ರಂಭಾಪುರಿ ಶ್ರೀಗಳು ಜಾತಿ ಪೀಠಗಳು ಸಮಾಜ ಕಲುಷಿತಗೊಳಿಸುತ್ತಿವೆ ಎಂಬ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.

ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಪೂಜ್ಯ ರಂಭಾಪುರಿ ಮಹಾಸ್ವಾಮೀಜಿ ಅವರದ್ದು ಒಂದು ಧ್ಯೇಯ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಧ್ಯೇಯವಾಕ್ಯ ಹೊಂದಿದ್ದಾರೆ. ಎಲ್ಲಾ ಸಮುದಾಯಗಳನ್ನು ರಂಭಾಪುರಿ ಶ್ರೀಗಳು ಗೌರವಿಸಬೇಕು. ಆಗ ಆ ಪೀಠಕ್ಕೆ ಗೌರವ ಸಲ್ಲುತ್ತದೆ. ಮಾನವ ಧರ್ಮಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದು ಮನಸ್ಸಿಗೆ ನೋವು ತಂದಿದೆ ಎಂದರು.

ಎರಡರಿಂದ ಮೂರು ದಶಕಗಳಲ್ಲಿ ಎಲ್ಲಾ ಸಮುದಾಯಗಳನ್ನು ಜಾಗೃತಿಗೊಳಿಸುವ, ಗಟ್ಟಿ ನೆಲೆಗೊಳಿಸುವ, ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಎಲ್ಲಾ ಪೀಠಗಳು ಹಗಲಿರುಳು ಶ್ರಮಿಸುತ್ತಿವೆ. ಪ್ರತಿಯೊಬ್ಬ ಭಕ್ತರಿಗೂ ಇದು ತಿಳಿದಿದೆ. ಜಾತಿ ಮಠಗಳ ಬಗ್ಗೆ ಟೀಕೆ ಮಾಡಿದ್ದು ಜಾತಿ ವ್ಯವಸ್ಥೆ ಘೋಷಿಸುವ ಸಂದರ್ಭಕ್ಕೆ ಪೂರಕವಾಗಿದೆ. ಈ ಮಾತು ಹಿಂದೆ ಪಡೆದರೆ ಅವರ ಮೇಲೆ ನಮಗೆ ಗೌರವ ಬರುತ್ತದೆ. ಅದೇ ರೀತಿಯ ಮಾತುಗಳಿಗೆ ಪೂರಕವಾಗಿ ಮಾತನಾಡಿದರೆ ದಾವಣಗೆರೆಯಲ್ಲಿ ಮಠಾಧೀಶರು ಪ್ರಬಲ ವಿರೋಧ ವ್ಯಕ್ತಪಡಿಸಬೇಕಾಗುತ್ತದೆ  ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಹೊಸದುರ್ಗ ಶ್ರೀ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ (ಉಪ್ಪಾರ) ಗುರುಪೀಠದ ಜಗದ್ಗುರು ಶ್ರೀ ಪುರಷೋತ್ತಮಾನಂದಪುರಿ ಮಹಾಸ್ವಾಮಿಗಳು, ಚಿತ್ರದುರ್ಗದ ಶ್ರೀ ಯಾದವ ಮಹಾಸಂಸ್ಥಾನ (ಗೊಲ್ಲರ) ಗುರುಪೀಠ ಜಗದ್ಗುರು ಶ್ರೀ ಕೃಷ್ಣಯಾದವ ಮಹಾಸ್ವಾಮಿಗಳು, ತೀರ್ಥಹಳ್ಳಿ ಈಡಿಗರ ಶ್ರೀ ನಾರಾಯಣ ಗುರು ಮಹಾಸಂಸ್ಥಾನ ಜಗದ್ಗುರು ಶ್ರೀ ಆರ್ಯರೇಣುಕಾನಂದ ಮಹಾಸ್ವಾಮಿಗಳು, , ಗುಬ್ಬಿ ಹೆಳವ ಗುರುಪೀಠದ ಶ್ರೀ ಬಸವ ಬೃಂಗೇಶ್ವರ ಮಹಾಸ್ವಾಮಿಗಳು, ಎರೇ ಹೊಸಹಳ್ಳಿ ಶ್ರೀ ವೇಮನ ಮಹಾಸಂಸ್ಥಾನ
ಮಠ, ರೆಡ್ಡಿ ಗುರುಪೀಠದ ಜಗದ್ಗುರು ಶ್ರೀ ವೇಮನಾನಂದ ಮಹಾಸ್ವಾಮಿಗಳು, ತೆಲಸಂಗ ಅಥಣಿಯ ಶ್ರೀ ಕುಂಬಾರ ಗುಂಡಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವ ಕುಂಬಾರಗುಂಡಯ್ಯಾ ಮಹಾಸ್ವಾಮಿಗಳು, ಮುದ್ದೇಬಿಹಾಳ ಶ್ರೀ ಹಡಪದಗುರುಪೀಠದ ಜಗದ್ಗುರು ಶ್ರೀ ಅನ್ನಧಾನಿ ಭಾರತೀಅಪ್ಪಣ್ಣ ಮಹಾಸ್ವಾಮಿಗಳು, ಕನಕ ಗುರುಪೀಠ ಶಾಖೆಯ ಪೂಜ್ಯ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, ಚಿತ್ರದುರ್ಗ ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಹಾಗೂ ಇನ್ನಿತರ ಮಠಾಧೀಶರು ಹಾಜರಿದ್ದರು.

Exit mobile version