Home ಬಿಸಿ ಉಮಾಪತಿ ವಿರುದ್ಧ ರೋಷಾವೇಶ: ಮಠದ ಲೆಕ್ಕ ಕೊಡುವವರೆಗೆ ಲೆಕ್ಕ ಕೊಡಿ ಚಳವಳಿ ನಡೆಸ್ತೇವೆಂದ ಹೆಚ್. ಎಸ್. ಶಿವಶಂಕರ್!
Homeಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬಿಸಿ ಉಮಾಪತಿ ವಿರುದ್ಧ ರೋಷಾವೇಶ: ಮಠದ ಲೆಕ್ಕ ಕೊಡುವವರೆಗೆ ಲೆಕ್ಕ ಕೊಡಿ ಚಳವಳಿ ನಡೆಸ್ತೇವೆಂದ ಹೆಚ್. ಎಸ್. ಶಿವಶಂಕರ್!

Share
ಮಠ
Share

ದಾವಣಗೆರೆ: ತಿಂದೋರಿಗೆ ಉಗುಳುವುದು ಕಷ್ಟ. ತಿಂದು ಬಿಟ್ಟಿದ್ದಾರೆ. ಲೆಕ್ಕಕೊಡಲು ಕಷ್ಟವಾಗಿದೆ. ಭಕ್ತರ ಗಂಟು ಪರಮಾತ್ಮನ ಗಂಟು. 2008ರಲ್ಲಿ ಪೀಠ ಸ್ಥಾಪನೆಯಾಗಿದೆ. ಅಂದಿನಿಂದ ಅಂದರೆ ಸುಮಾರು 18 ವರ್ಷ ಮಠದ ಕಡೆ ದೃಷ್ಟಿ ಹಾಯಿಸಿಲ್ಲ. ನಾನು ಮತ್ತು ತಂದೆಯವರು ಜಾಗ ಕೊಟ್ಟಿದ್ದು. ಟ್ರಸ್ಟಿಗಳ ಆಸ್ತಿ 2008ರಲ್ಲಿ ಎಷ್ಟಿತ್ತು? ಇಂದು ಎಷ್ಟಿದೆ. ಮಠದ ಟ್ರಸ್ಟಿಗಳಾಗಲು ಏನು ಅರ್ಹತೆ ಇದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ವಾಗ್ದಾಳಿ ನಡೆಸಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಉಚ್ಚಾಟನೆ ಸಂಬಂಧ ಕರೆಯಲಾಗಿದ್ದ ಸಭೆಗೆ ಮುನ್ನ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜದ
ಟ್ರಸ್ಟ್ ಸಮಿತಿಯ ಟ್ರಸ್ಟಿಗಳ ವಿರುದ್ಧ ಬೆಂಕಿಯುಗುಳಿದರು.

ಮಾವ ಅಳಿಯನ ಟ್ರಸ್ಟ್ ಆದರೆ ಖಾಸಗಿಯಾಗಿಟ್ಟುಕೊಳ್ಳಿ. ರಾಜ್ಯಾದ್ಯಂತ ಮಠಕ್ಕೆ ಇರುವ ಬಡ ಭಕ್ತರ ಬೆವರಿನ ಹಣ ಇದು. ಲೆಕ್ಕ ಕೊಡಿ. 68 ಕೋಟಿ ರೂಪಾಯಿ ಲೆಕ್ಕ ನೀಡಲೇಬೇಕು. ಸಮಾಜ ನಿಮ್ಮಪ್ಪನ ಆಸ್ತಿ ಅಲ್ಲ. ಇದು ಸಮಾಜದ ಆಸ್ತಿ. ಸಮಾಜದ ಮುಂದೆ ಧೈರ್ಯವಾಗಿ ಸಭೆ ಕರೆದು ಯಾಕೆ ಲೆಕ್ಕ ಕೊಡುತ್ತಿಲ್ಲ. ಲೆಕ್ಕ ಕೊಡುವವರೆಗೆ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲದು. ರಾಮ, ಕೃಷ್ಣನ ಲೆಕ್ಕ ಬೇಡ, ಧರ್ಮದ ಲೆಕ್ಕ ಕೊಡಿ. ಬಡವರು ಬೆವರು ಸುರಿಸಿ ಮಠಕ್ಕೆ ದೇಣಿಗೆ ನೀಡಿದ್ದಾರೆ. ದಾನ ಕೊಟ್ಟಿದ್ದಾರೆ. ಆದರೆ ಟ್ರಸ್ಟಿಗಳು ಹಣ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು.

2ಎ ಮೀಸಲಾತಿಗೆ ನಡೆದ ಹೋರಾಟದಲ್ಲಿ ಟ್ರಸ್ಟಿಗಳ ಕೊಡುಗೆ ಏನು? ಹೋರಾಟಕ್ಕೆ ಕೊಡಲಿ ಪೆಟ್ಟು ಕೊಡಲು ಬಂದವರು ಟ್ರಸ್ಟಿನವರು. ಸರ್ಕಾರದ ಹಣ, ಬಡವರು, ದಾನದ ರೂಪದಲ್ಲಿ ಬಂದ ಹಣ ಲೂಟಿ ಮಾಡಿದ್ದೀರಿ. ಇನ್ನೂ ಎಷ್ಟು ಬೇಕು?
ಲೆಕ್ಕ ಕೊಡಿ ಚಳವಳಿ ಪ್ರಾರಂಭವಾಗಿದೆ. ಸ್ವಾಮಿ ಉಚ್ಚಾಟನೆ ಮಾಡಲು ಬಂದರೆ ತಡೆಯಲು ಆಗಲ್ಲ ಎಂದು ಗುಡುಗಿದರು.

ಸ್ವಾಮೀಜಿ ಉಚ್ಚಾಟನೆ ಮಾಡುತ್ತೇವೆಂದು ಬಂದರೆ ಸಮಾಜ ಸುಮ್ಮನೆ ಕೂರುವುದಿಲ್ಲ. ಉಚ್ಚಾಟನೆ ಮಾಡುವ ಚಟವಿದ್ದರೆ ನಿನ್ನನ್ನೇ ಸ್ವಾಮಿ ಮಾಡ್ತೇವೆ. ಖಾವಿ ಗೌನ್ ಹೊಲಿಸಿದ್ದೀವಿ. ಆ ಸ್ವಾಮೀಜಿ ತಂದು ಕಳುಹಿಸೋದು, ಈ ಸ್ವಾಮೀಜಿ ತಂದು ಕಳುಹಿಸೋದು. ಹತ್ತು ಹರಕೆ ತಂದು ಹಡದುಕೊಂಡು ಬಂದಿದ್ದೀಯಾ. ಸ್ವಾಮಿ ಶುದ್ದವಾಗಿದ್ದರೆ ಎಂದು ನೀನೇ ಅಂದು ಕೂರಿಸಿದ್ದೆ. ಓಳಿ ಆಡಿಸಿದ್ದೆ. ಕುಣಿಸಿದ್ದೆ. ಆಗ ಸ್ವಾಮೀಜಿ ಶುದ್ದವಾಗಿದ್ದಾರೆ ಎಂದು ಪ್ರಚಾರ ಮಾಡಿದ್ದೀರಾ. ಈಗ ಸ್ವಾಮೀಜಿ ಸರಿ ಇಲ್ಲವೇ? ಎಂದು ಬಿ. ಸಿ. ಉಮಾಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಮೀಜಿ ಪೀಠದಲ್ಲಿ ಉಳಿಯಬೇಕು. 68 ಕೋಟಿ ರೂಪಾಯಿ ಲೆಕ್ಕ ಕೊಡಬೇಕು. ಇದು ಮಾಡು ಇಲ್ಲವೇ ಮಡಿ ಹೋರಾಟ. ಲೆಕ್ಕ ಕೊಡಿ ಚಳವಳಿ ಟ್ರಸ್ಟ್ ಕಳ್ಳರನ್ನು ಹೊರ ಹಾಕಿದ ಮೇಲೆಯೇ ನಿಲ್ಲುವುದು. ಹೋರಾಟದ ಕಿಚ್ಚು ನಿಲ್ಲದು. ಪೊಲೀಸ್ ರಕ್ಷಣೆಯಲ್ಲಿ ಸಭೆ ಮಾಡಲು ಬಂದಿರುವ ನಿಮಗೆ ಯಾವ ನೈತಿಕತೆ ಇದೆ? ಹತಾಶರಾಗಿದ್ದೀರಾ. ಶಕ್ತಿ ಕಳೆದುಕೊಂಡಿದ್ದೀರಾ. ಮರ್ಯಾದೆಯಿಂದ ಸಭೆ ರದ್ದು ಮಾಡಿ ನೀವು ಸಮಾಜಕ್ಕೆ ಲೆಕ್ಕ ಕೊಟ್ಟು ಒಳಗೆ ಬನ್ನಿ ಎಂದು ಗುಡುಗಿದರು.

ಇಂದು ಪೊಲೀಸರ ರಕ್ಷಣೆಯಲ್ಲಿ ಸಭೆ ನಡೆಸುತ್ತಿರುವುದು ನಾಚಿಕೆ, ಅಸಹ್ಯ ಎನಿಸುತ್ತಿದೆ. ಕಳ್ಳರ ಜೊತೆ ಪೊಲೀಸರು ಸೇರಿದಂತಾಗಿದೆ. ಪೊಲೀಸರು ಒಳ್ಳೆಯವರು. ಆದರೆ ಮೇಲಿನ ಆದೇಶ ಪಾಲಿಸುತ್ತಾರೆ. ಲೂಟಿಕೋರರ ವಿರುದ್ಧ ಹೋರಾಟ ನಮ್ಮದು. ವೀರಶೈವ ಲಿಂಗಾಯತ ಸಮಾಜದ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ಪಂಚಮಸಾಲಿಗಳಿಗೆ ಕೊಡಲಿ ಪೆಟ್ಟು ನೀಡಿ 2ಎ ಮೀಸಲಾತಿಗೆ ಹೋರಾಟ ಮಾಡಿದಾಗ ಲಾಠಿ ಚಾರ್ಜ್ ಮಾಡಿದ್ದಂಥ ದರಿದ್ರ ಕಾಂಗ್ರೆಸ್ ಸರ್ಕಾರ. ಉಮಾಪತಿ ತಂಡ ಮನೆಗೆ
ಹೋಗಬೇಕು. ಇಲ್ಲಿಗೆ ಬರಕೂಡದು. ಹತ್ತಾರು ಕೋಟಿ ರೂಪಾಯಿ ಅವ್ಯವಹಾರ. ಬೋಗಸ್ ಬಿಲ್ ಬರೆದು ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದೀರಾ. ನಿಮ್ಮನ್ನು ಸಮಾಜ ಎಂದಿಗೂ ಕ್ಷಮಿಸದು ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles