Home ಕ್ರೈಂ ನ್ಯೂಸ್ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಐವರು ಸರಗಳ್ಳರ ಬಂಧನ, 22.12 ಲಕ್ಷ ಮೌಲ್ಯದ ಸ್ವತ್ತು ವಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಐವರು ಸರಗಳ್ಳರ ಬಂಧನ, 22.12 ಲಕ್ಷ ಮೌಲ್ಯದ ಸ್ವತ್ತು ವಶ!

Share
ಮಹಿಳೆ
Share

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 22.12 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, ಎರಡು ಕಾರು ಹಾಗೂ ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ:

ಮಾರ್ಚ್ 8ರಂದು ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮದ ಸತೀಶ್ ಎಂಬುವವರು ಪತ್ನಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹೊನ್ನಾಳಿ-ಶಿಕಾರಿಪುರ ರಸ್ತೆಯ ಸೊರಟೂರು ಕ್ರಾಸ್ ಬಳಿ ಇಬ್ಬರು ಖದೀಮರು ಪತ್ನಿಯ ಕೊರಳಲ್ಲಿದ್ದ 8 ಗ್ರಾಂ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯ ಹಾದಿ:

ಡಿವೈಎಸ್ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಪಿಐ ಸುನೀಲ್ ಕುಮಾರ್ ಹೆಚ್ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಘಟನಾ ಸ್ಥಳದ ಬಳಿ ಆರೋಪಿಗಳು ಬಿಟ್ಟು ಹೋಗಿದ್ದ ಬೈಕ್ ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಎ1 ಆರೋಪಿ ನಿಯಾಜ್ ಅಹಮದ್‌ನನ್ನು ರಾಣೇಬೆನ್ನೂರಿನಲ್ಲಿ ಪತ್ತೆಹಚ್ಚಲಾಯಿತು. ವಿಚಾರಣೆ ವೇಳೆ ಈತ ತನ್ನ ನಾಲ್ವರು ಸಹಚರರೊಂದಿಗೆ ಸೇರಿ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ.

ಬಂಧಿತ ಆರೋಪಿಗಳು:

ನಿಯಾಜ್ ಎಂ @ ಸಾದಿಕ್ ಮುಂಡರಗಿ (23 ವರ್ಷ, ಹಾವೇರಿ)

ಮುಸ್ತಾಕ್ (20 ವರ್ಷ, ಹಾವೇರಿ)

ಸುಹೀಲ್ @ ಸುಹೀಲ್ ಬಾಷಾ (19 ವರ್ಷ, ಹಾವೇರಿ)

ಅಂಜುಮ್ ಬಾನು (22 ವರ್ಷ, ಹಾವೇರಿ)

ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕ.

ಕಳ್ಳತನಕ್ಕೆ ಪ್ರೇರಣೆ:

ಎ1 ಆರೋಪಿ ನಿಯಾಜ್ ಕ್ರಿಕೆಟ್ ಬೆಟ್ಟಿಂಗ್ ಮತ್ತು ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಸುಮಾರು 15-20 ಲಕ್ಷ ರೂ. ಸಾಲ ಮಾಡಿಕೊಂಡಿದ್ದನು. ಸಾಲಗಾರರ ಕಿರುಕುಳ ಮತ್ತು ಅಕ್ಕನ ಮದುವೆಗೆ ಹಣ ಹೊಂದಿಸುವ ಸಲುವಾಗಿ ಈ ತಂಡ ಕಟ್ಟಿಕೊಂಡು ದಾವಣಗೆರೆಯ ಆಂಜನೇಯ ಬಡಾವಣೆಯ ಪಾರ್ಕ್‌ನಲ್ಲಿ ಕುಳಿತು ಸರಗಳ್ಳತನಕ್ಕೆ ಸಂಚು ರೂಪಿಸಿದ್ದರು. ಈ ತಂಡವು ಭರಮಸಾಗರ ಮತ್ತು ಹೊನ್ನಾಳಿ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿರುವುದು ದೃಢಪಟ್ಟಿದೆ.

ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *