Site icon Kannada News-suddikshana

ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೇನುತುಪ್ಪಕ್ಕೆ ಮಾನ್ಯತೆ, ಝೇಂಕಾರ ಜೀವನೋಲ್ಲಾಸಕ್ಕೆ ಜೇನು ಬ್ರಾಂಡ್ ನೋಂದಣಿ: ಎಸ್.ಎಸ್ ಮಲ್ಲಿಕಾರ್ಜುನ್

SUDDIKSHANA KANNADA NEWS/ DAVANAGERE/ DATE-21-05-2025

ದಾವಣಗೆರೆ: ರಾಜ್ಯದಲ್ಲಿ ಉತ್ಪಾದಿಸುವ ಜೇನುತುಪ್ಪಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ವೇದಿಕೆಯನ್ನು ಒದಗಿಸುವ ಸಲುವಾಗಿ ಇಲಾಖೆಯಿಂದ “ಝೇಂಕಾರ”, ಜೀವನೋಲ್ಲಾಸಕ್ಕೆ ಜೇನು ಎಂಬ ಬ್ರಾಂಡ್ ಅನ್ನು ನೊಂದಾಯಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿಚರಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ತಿಳಿಸಿದರು.

ನಗರದ ಗೃಹ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಜೇನು ಉದ್ಯಮಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ ಎಂದು ತಿಳಿಸಿದ ಸಚಿವರು ಐತಿಹಾಸಿಕ ನಗರ – ಮೈಸೂರಿನಲ್ಲಿ ತೋಟಗಾರಿಕೆ ಇಲಾಖೆಯಡಿ 15 ಎಕರೆ ವಿಸ್ತೀರ್ಣದ ಲಿಂಗಾಬುಧಿ ಸಸ್ಯ ಶಾಸ್ತ್ರೀಯ ತೋಟವನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ಭೌಗೋಳಿಕ ಚಿಹ್ನೆ ಹೊಂದಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಮತ್ತು ಮೈಸೂರು ವೀಳ್ಯದೆಲೆಗಳ ಸಂರಕ್ಷಣೆಗಾಗಿ 14 ಹೆಕ್ಟೇರ್ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆಗಳನ್ನು ಹಾಗೂ 175 ರೈತರಿಗೆ ತರಬೇತಿಗಳನ್ನು ನೀಡಲಾಗಿದೆ ಎಂದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ರಾಜ್ಯದಾದ್ಯಂತ 11 ಮಹಾನಗರ ಪಾಲಿಕೆಗಳಲ್ಲಿ 13,860 ವಿದ್ಯಾರ್ಥಿಗಳಿಗೆ 138 ಕಾರ್ಯಕ್ರಮಗಳ ಮೂಲಕ ತರಬೇತಿ ನೀಡಲಾಗಿದೆ. ಬೀಜದಿಂದ ಮಾರುಕಟ್ಟೆಯವರೆಗಿನ ಪೂರಕ ಚಟುವಟಿಕೆಗಳಿಗೆ ಅವಶ್ಯವಿರುವ ಎಲ್ಲಾ ರೀತಿಯ ಸೇವೆಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ರೈತರಿಗೆ / ಸಾರ್ವಜನಿಕರಿಗೆ ಒದಗಿಸಲು ತೋಟಗಾರಿಕೆ ಕಿಸಾನ್ ಮಾಲ್ ಕೇಂದ್ರ” ಗಳನ್ನು ಮೈಸೂರು, ಮದ್ದೂರು, ದಾವಣಗೆರೆ, ಧಾರವಾಡ ಮತ್ತು ಬಾಗಲಕೋಟೆಗಳಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ವತಿಯಿಂದ 16 ವಿವಿಧ ತೋಟಗಾರಿಕೆ ಬೆಳೆಗಳ ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ ಸಚಿವರು ತೋಟಗಾರಿಕೆಯಲ್ಲಿ ನೂತನ ಅವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಲು ಅನುವಾಗುವಂತೆ “ಉನ್ನತ ಮಟ್ಟದ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅನ್ನು ಸಿರಿವಾರ, ಕನಕಗಿರಿ ತಾಲ್ಲೂಕು ಕೊಪ್ಪಳ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಬೆಂಗಳೂರು ಹಾಪ್‌ ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲು ರೂ.15 ಕೋಟಿಗಳ ದುಡಿಯುವ ಬಂಡವಾಳ ನೆರವನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

Exit mobile version