ದಾವಣಗೆರೆ: ನಗರದ ಶಾರದಾಂಬ ದೇವಾಸ್ಥಾನದ ಬಳಿ ಹಣ, ದಾಖಲೆಗಳು ಇರುವ ಬ್ಯಾಗ್ ಅನ್ನು ಮರೆತು ಬಿಟ್ಟು ಹೋಗಿದ್ದ ವ್ಯಕ್ತಿಗೆ ಪುನಃ ದೊರೆತಿದೆ.
ಸಿಕ್ಕ ಬ್ಯಾಗ್ ಅನ್ನು ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ದೇವಸ್ಥಾನದ ವಾಚ್ ಮ್ಯಾನ್ ಮಂಜಪ್ಪ ಎಂಬುವವರು ಗಮನಿಸಿ ಈ ಬಗ್ಗೆ ದೇವಸ್ಥಾನದ ಪದಾಧಿಕಾರಿಗಳ ಗಮನಕ್ಕೆ ತಂದರು. ಬಳಿಕ ಪೊಲೀಸರಿಗೆ ಈ ವಿಷಯ ಮುಟ್ಟಿಸಿದರು. ಇದು ಪೊಲೀಸ್ ಅಧೀಕ್ಷಕಿಯ ಗಮನಕ್ಕೂ ಬಂದಿತ್ತು.
ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಹೋಗಿ ಬ್ಯಾಗ್ ಅನ್ನು ಪರಿಶೀಲಿಸಿ, ದೇವಾಸ್ಥಾನದ ಪದಾಧಿಕಾರಿಗಳು ಹಾಗೂ ವಾಚ್ ಮ್ಯಾನ್ ನೊಂದಿಗೆ ಜಿಲ್ಲಾ ಪೊಲೀಸ್ ಕಚೇರಿಗೆ ತಂದು ಎಸ್ಪಿ ಉಮಾ ಪ್ರಶಾಂತ್ ಅವರ ಬಳಿ ಹಾಜರುಪಡಿಸಿದರು.
ಈ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಶ್ರೀನಿವಾಸ್ ಎಂಬ ವ್ಯಕ್ತಿಯ ಬ್ಯಾಂಕ್ ಚೆಕ್ ಬುಕ್ ಸೇರಿದಂತೆ ವಿವಿಧ ದಾಖಲೆಗಳು ಇದ್ದವು. ದಾಖಲೆಗಳನ್ನುಆಧರಿಸಿ ವ್ಯಕ್ತಿಯನ್ನು ಸಂಪರ್ಕಿಸಿ ಕಚೇರಿಗೆ ಕರೆಯಿಸಿ, ಬ್ಯಾಗ್ ವಾರಸುದಾರ ಶ್ರೀನಿವಾಸ್ ಅವರನ್ನು ಬ್ಯಾಗ್ ಬಗ್ಗೆ ವಿಚಾರಣೆ ಮಾಡಿ ಖಚಿತಪಡಿಸಿಕೊಳ್ಳಲಾಯಿತು.
ಉಮಾ ಪ್ರಶಾಂತ್ ಅವರು ಶ್ರೀ ಶಾರದಾಂಬ ದೇವಾಸ್ಥಾನದ ಪದಾಧಿಕಾರಿಗಳು, ವಾಚ್ ಮನ್ ಮಂಜಪ್ಪ ಅವರ ಉಪಸ್ಥಿತಿಯಲ್ಲಿ ಬ್ಯಾಗ್ ಅನ್ನು ಬ್ಯಾಗ್ ವಾರಸುದಾರರಿಗೆ ಹಸ್ತಾಂತರಿಸಿದರು.
ಈ ವೇಳೆ ತಮಗೆ ಸಿಕ್ಕ ಅನಾಮಧೇಯ ಬ್ಯಾಗ್ ಅನ್ನು ದೇವಸ್ಥಾನದ ಪದಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದು, ನಂತರ ಬ್ಯಾಗ್ ನ ವಾರಸುದಾರರಿಗೆ ಮರಳಿಸುವಲ್ಲಿ ಪ್ರಾಮಾಣಿಕತೆಯನ್ನು ಮೆರೆದ ಶ್ರೀ ಶಾರದಾಂಬ ದೇವಸ್ಥಾನದ ವಾಚ್ ಮ್ಯಾನ್ ಮಂಜಪ್ಪ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಪ್ರಶಂಸಿಸಿದರು. ನಗದು ಬಹುಮಾನವನ್ನೂ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಪಿಎಸ್ ಐ ರಾಘವೇಂದ್ರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.





Leave a comment