Site icon Kannada News-suddikshana

ಇನ್ನು ನಾಲ್ಕು ದಿನ ಸುರಿಯಲಿದೆ ಭಾರೀ ಮಳೆ: ಅಲರ್ಟ್ ಸೂಚನೆ ಕೊಟ್ಟ ಹವಾಮಾನ ಇಲಾಖೆ..!

SUDDIKSHANA KANNADA NEWS/ DAVANAGERE/ DATE:16-10-2024

ಬೆಂಗಳೂರು: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರಿಯಲಿದೆ. ಅಕ್ಟೋಬರ್ 19ರವರೆಗೆ ಧಾರಾಕಾರ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಮಳೆಯ ವಾತಾವರಣವಿತ್ತು. ಹಗಲು ವೇಳೆಯಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯಾಗಿದ್ದು, ಸಂಜೆ, ರಾತ್ರಿ ವೇಳೆಯಲ್ಲಿ ಹಲವೆಡೆ ಉತ್ತಮ ಮಳೆಯಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನಲೆಯಲ್ಲಿ ಇನ್ನೂ ನಾಲ್ಕು ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರವಾಗಿ ವರ್ಷಧಾರೆ ಸುರಿಯಲಿದೆ. ಈಗಾಗಲೇ ಮೀನು ಹಿಡಿಯಲು ಹೋಗಿರುವ ಮೀನುಗಾರರು ಬೋಟ್ ಗಳ ಜೊತೆ ದಡ ಸೇರುವಂತೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.

ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾರಿ ಮಳೆ ಹಾಗೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾದ್ಯತೆ ಇರುವುದರಿಂದ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ, ಸಮುದ್ರ ತೀರಕ್ಕೆ ಸಾರ್ವಜನಿಕರು ಹಾಗೂ ಪ್ರವಾಸಿಗರು ತೆರಳದಂತೆ ಎಚ್ಚರಿಕೆ ವಹಿಸಲು ದ‌.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

ಕರಾವಳಿಗೆ ಬುಧವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಗುರುವಾರ ಮತ್ತು ಶುಕ್ರವಾರ ಎಲ್ಲೋ ಅಲರ್ಟ್‌ ಇದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 27.6 ಡಿ.ಸೆ. ದಾಖಲಾಗಿದ್ದು, ಮಳೆ ವಾತಾವರಣದಿಂದಾಗಿ ಸಾಮಾನ್ಯಕ್ಕಿಂತ 3.4 ಡಿ.ಸೆ. ಇಳಿಕೆಯಾಗಿದೆ. ಕನಿಷ್ಠ ತಾಪಮಾನ 23.6 ಡಿ.ಸೆ. ದಾಖಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಇಂದು ಮತ್ತು ನಾಳೆ ಹವಾಮಾನ ಇಲಾಖೆಯು ನೀಡಿರುವ ಆರೆಂಜ್‍ ಅಲರ್ಟ್‍ ಮುನ್ಸೂಚನೆ ನೀಡಿದ್ದು, ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗ್ರತೆ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬುಧವಾರ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ ಹಾಗೂ ಖಾಸಗೀ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ಬೆಂಗಳೂರು ನಗರ ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ ಜಿ. ಆದೇಶ ನೀಡಿದ್ದಾರೆ.

Exit mobile version