ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ ಜೋರಾಗಿದೆ. ಕಳೆದೊಂದು ವಾರದಿಂದ ರಾಜ್ಯದ ಬಹುತೇಕ ಕಡೆ ವರುಣಾಬ್ಬರ ಜೋರಾಗಿದ್ದು, ಈ ನಡುವೆ ಮುಂದಿನ ನಾಲ್ಕೈದು ದಿನ ಮಳೆ ಅಬ್ಬರಿಸೋ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮನೆಯಿಂದ ಹೊರಹೋಗುವ ಮುನ್ನ ಅಗತ್ಯವಾಗಿ ರೈನ್ ಕೋಟ್ ಮತ್ತು ಕೊಡೆ ತೆಗೆದುಕೊಳ್ಳುವುದನ್ನು ಮರೆಯಬೇಡಿ.
ಬೆಂಗಳೂರು ಸುತ್ತಮುತ್ತ ಮೇ 24ರ ವರೆಗೆ ಮುಂದಿನ ಐದು ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾರಾಂತ್ಯದಲ್ಲಿ ತಂಪಾದ ಆರ್ದ್ರ ವಾತಾವರಣವಿದ್ದು, ಶನಿವಾರ ಕೆಲವೆಡೆ ತುಂತುರು ಮಳೆಯಾಗಿದ್ದು, ಭಾನುವಾರವೂ ಸಾಧಾರಣ ಮಳೆಯಾಗಿದೆ. ಹೀಗಾಗಿ ಅನೇಕ ಬೆಂಗಳೂರಿಗರು ತಮ್ಮ ವೀಕೆಂಡ್ ಪ್ಲಾನ್ ರದ್ದುಗೊಳಿಸಿ ಮನೆಯಲ್ಲೇ ಉಳಿದರು, ಕೆಲವರು ನಗರದ ಹವಾಮಾನವನ್ನು ಆನಂದಿಸಲು ಮಳೆಯನ್ನು ಧೈರ್ಯದಿಂದ ಎದುರಿಸಿದರು. ಬೆಂಗಳೂರು ನಗರದಲ್ಲಿ 17.8 ಮಿ.ಮೀ ಮಳೆ ದಾಖಲಾಗಿದ್ದರೆ, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ 8.30ರವರೆಗೆ 37.6 ಮಿ.ಮೀ ಮಳೆ ದಾಖಲಾಗಿದೆ. ನಗರದಾದ್ಯಂತ ಸುಮಾರು 15 ಮರಗಳು ನೆಲಕ್ಕುರುಳಿದ್ದು, 50 ಮರದ ಕೊಂಬೆಗಳು ಬಿದ್ದಿವೆ. ಇಂದಿರಾನಗರ, ಎಂಎಸ್ ಪಾಳ್ಯ ಮತ್ತು ಯಲಹಂಕದ ನಿವಾಸಿಗಳು ಮರ ಬಿದ್ದ ಘಟನೆಗಳನ್ನು ವರದಿ ಮಾಡಿದ್ದಾರೆ. ಕನಿಷ್ಠ 13 ಮರಗಳು ಮತ್ತು 32 ಕೊಂಬೆಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದಾರೆ.