Site icon Kannada News-suddikshana

HEALTH TIPS: ಬಾಚಿದ್ರೆ ಹಿಡಿ ಕೂದಲು ಕೈಗೆ ಬರುತ್ತಾ? ಅಲೋವೆರಾವನ್ನು ಹೀಗೆ ಬಳಸಿ

ಸಾಮಾನ್ಯವಾಗಿ ನಮ್ಮ ಕೂದಲು ಉದ್ದವಾಗಿ ಮತ್ತು ದಪ್ಪವಾಗಿ ಸುಂದರವಾಗಿ ಕಾಣಬೇಕು ಎಂದು ಎಲ್ಲ ಹುಡುಗಿಯರು ಆಸೆ ಹೊಂದಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದಾರೆ. ಅದರಲ್ಲೂ 20-25 ನೇ ವಯಸ್ಸಿನಲ್ಲಿಯೇ ಕೂದಲು ಉದುರುವಿಕೆ ಸಮಸ್ಯೆಯಿಂದ ಸಾಕಷ್ಟು ಮಂದಿ ಬಳಲುತ್ತಿದ್ದಾರೆ.

ಇದರಿಂದಾಗಿ ಮುಜುಗರಕ್ಕೊಳಗಾಗುವುದರೊಂದಿಗೆ ಅಂತಹವರಲ್ಲಿ ಆತ್ಮವಿಶ್ವಾಸ ಕಡಿಮೆ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಂದಿನ ಅನಾರೋಗ್ಯಕರ ಜೀವನಶೈಲಿ ಮತ್ತು ಅನಗತ್ಯ ಆಹಾರ ಆಗಿರಬಹುದು. ಕೆಲ ಮಂದಿಗೆ ಕೂದಲನ್ನು ಬಾಚಿದರೆ ಸಾಕು ಬಹಳಷ್ಟು ಕೂದಲು ಉದುರುತ್ತದೆ. ನೀವು ಕೂಡ ಈ ಸಮಸ್ಯೆ ಎದುರಿಸುತ್ತಿದ್ದರೆ, ಕೂದಲಿಗೆ ಎಣ್ಣೆಯೊಂದಿಗೆ ಅಲೋವೆರಾ ಜೆಲ್ ಬೆರೆಸಿ ಹೀಗೆ ಹಚ್ಚಿ.

ಹೇರ್ ಆಯಿಲ್ ಮಸಾಜ್: ಸಮಯಂ ವರದಿ ಪ್ರಕಾರ, ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ. ಎಣ್ಣೆ ಮಸಾಜ್ ಡ್ಯಾಂಡ್ರಫ್ ಮತ್ತು ಒಣ ಕೂದಲು ಸಮಸ್ಯೆ ತೊಡೆದುಹಾಕಲು ಸಹಾಯ ಮಾಡುತ್ತದೆ.

ಈ ಉದ್ದೇಶದಿಂದ ಅನೇಕ ಮಂದಿ ಕೂದಲಿಗೆ ಸಾಕಷ್ಟು ರೀತಿಯ ಎಣ್ಣೆಗಳನ್ನು ಬಳಸುತ್ತಾರೆ. ಆದರೆ ಇನ್ಮುಂದೆ ಕೂದಲಿಗೆ ಅಲೋವೆರಾ ಎಣ್ಣೆಯನ್ನು ಬಳಸಿ. ಇದು ಕೂದಲು ಉದುರುವಿಕೆ ಸಮಸ್ಯೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲದೇ, ನಿಮ್ಮ ಕೂದಲನ್ನು ಶೈನ್ ಆಗಿಸುತ್ತದೆ. ಹಾಗಾದ್ರೆ ಈ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂದು ನಾವಿಂದು ತಿಳಿಯೋಣ.

ಅಲೋವೆರಾ ಜೆಲ್: ಅಲೋವೆರಾ ಕೂದಲಿನ ಆರೋಗ್ಯ ಮತ್ತು ಚರ್ಮದ ಸಮಸ್ಯೆಗಳಿಗೆ ಒಳ್ಳೆಯದು. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕೂದಲಿಗೆ ಹೊಳಪನ್ನು ನೀಡುತ್ತದೆ. ಜೊತೆಗೆ ಕೂದಲನ್ನು ಮೃದುವಾಗಿಸುತ್ತದೆ. ಉತ್ತಮ ಕಂಡೀಷನಿಂಗ್ ಗುಣ ಹೊಂದಿರುವ ಈ ಎಣ್ಣೆಯನ್ನು ಅಲೋವೆರಾದೊಂದಿಗೆ ಬಳಸುವುದು ಒಳ್ಳೆಯದು.

ತಯಾರಿಸುವುದ ಹೇಗೆ?: ಮೊದಲು ಶುದ್ಧ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಇದಕ್ಕಾಗಿ ಅಲೋವೆರಾ ಜೆಲ್ 2 ಅನ್ನು ಹೊರ ತೆಗೆದು ಅದನ್ನು ಮೃದುಗೊಳಿಸಿ.ಈಗ ಕಬ್ಬಿಣದ ಪ್ಯಾನ್ ತೆಗೆದುಕೊಂಡು ತೆಂಗಿನ ಎಣ್ಣೆ ಹಾಗೂ ಅಲೋವೆರಾ ಜೆಲ್ ಬೆರೆಸಿ ಕುದಿಸಿ. ಈಗ ಎಲ್ಲಾ ನೀರು ಎಣ್ಣೆಯಲ್ಲಿ ಆವಿಯಾಗುವವರೆಗೆ ಕುದಿಸಿ. ಆ ಪಾತ್ರೆಯನ್ನು ಒಂದು ದಿನ ಬಿಟ್ಟು ಮರುದಿನ ಸೋಸಿದರೆ ಎಣ್ಣೆ ಸಿದ್ಧವಾಗುತ್ತದೆ.

ಎಣ್ಣೆ ಹಚ್ಚಿ: ಮಲಗುವ ಮುನ್ನ ಉಗುರುಬೆಚ್ಚಗಿನ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಇದು ನೆತ್ತಿಯ ಪೋಷಣೆಯನ್ನು ಮಾತ್ರವಲ್ಲದೇ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಆದರೆ, ಬೆಳಗ್ಗೆ ನಿಮ್ಮ ಕೂದಲಿಗೆ ಶಾಂಪೂ ಹಚ್ಚಿ ತೊಳೆಯುವುದನ್ನು ಮರೆಯಬೇಡಿ. ಇದು ನಿಮ್ಮ ಕೂದಲನ್ನು ಮೃದು ಮತ್ತು ಬಲವಾಗಿಸುತ್ತದೆ.

Exit mobile version