Site icon Kannada News-suddikshana

ಹಾವೇರಿ ಅಪಘಾತ ಪ್ರಕರಣ : ಮೃತ ಕುಟುಂಬಸ್ಥರಿಗೆ ನಟ ಶಿವಣ್ಣ ದಂಪತಿಯವರಿಂದ ತಲಾ 1 ಲಕ್ಷ ರೂ.ಪರಿಹಾರ

ಶಿವಮೊಗ್ಗ : ಇತ್ತೀಚಿಗೆ ಹಾವೇರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಎಮ್ಮೆಹಟ್ಟಿಯ 13 ಜನರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಇಂದು ನಟ ಶಿವರಾಜಕುಮಾರ್ ಪತ್ನಿ ಗೀತಾ ಮೃತ ಕುಟುಂಬಸ್ಥರಿಗೆ ಭೇಟಿ ನೀಡಿ ಸಾಂತ್ವನ ಹೇಳಿ 1 ಲಕ್ಷ ರೂಪಾಯಿ ಪರಿಹಾರ ನೀಡಿದರು.

ಹೌದು ಅಪಘಾತದಲ್ಲಿ ಮೃತಪಟ್ಟ ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿ ಗ್ರಾಮದ 13 ಜನರ ಕುಟುಂಬಗಳಿಗೆ ಶಿವರಾಜ್​ಕುಮಾರ್​ ಮತ್ತು ಗೀತಾ ದಂಪತಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಪ್ರತಿ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. ಈ ಕುಟುಂಬದವರಿಗೆ ನೋವು ಸಹಿಸುವ ಶಕ್ತಿಯನ್ನು ದೇವರ ನೀಡಲಿ ಎಂದು ಶಿವರಾಜ್​ಕುಮಾರ್​-ಗೀತಾ ದಂಪತಿ ಪ್ರಾರ್ಥಿಸಿದ್ದಾರೆ.

ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಶಿವರಾಜಕುಮಾರ, ಸಹಾಯ ಮಾಡುವುದು ಸುಲಭ. ಆದರೆ ಈ ಕುಟುಂಬದವರಿಗೆ ಸಮಾಧಾನ ಮಾಡುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲ ಒಂದಾಗಿ ಇರುವುದೇ ದೊಡ್ಡ ವಿಷಯ. ಕುಟುಂಬದವರಿಗೆ ಆದ ನಷ್ಟ ಪ್ರತಿದಿನವೂ ಕಾಡುತ್ತಾ ಇರುತ್ತದೆ. ನೋವನ್ನು ಸಹಿಸುವ ಶಕ್ತಿ ಆ ದೇವರು ನೀಡಲಿ ಅಂತ ಕೇಳಿಕೊಳ್ಳುತ್ತೇನೆ. ಇಲ್ಲಿಗೆ ಬಂದು ನೋಡಿದಾಗ ಬಹಳ ಬೇಸರ ಆಯಿತು. ಇಂಥ ಘಟನೆ ಆಗಬಾರದಾಯಿತು. ನಮ್ಮ ಕೈಯಲ್ಲಿ ಆದ ಸಹಾಯ ಮಾಡಿದ್ದೇವೆ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಬಳಿಕ ಗೀತಾ ಶಿವರಾಜ್​ಕುಮಾರ್​ ಅವರು ಮಾತನಾಡಿ. ಈ ದುರ್ಘಟನೆ ನಡೆದಾಗಿನಿಂದ ಇಲ್ಲಿಗೆ ಬರುವ ಧೈರ್ಯ ಮಾಡಲು ನನಗೆ ತುಂಬ ಕಷ್ಟ ಆಯಿತು. 13 ಜನರ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರೇ ನೀಡಬೇಕು. ಅವರಿಗೆ ಆಗಿರುವ ನಷ್ಟವನ್ನು ನಾವು ಯಾರೂ ಕೂಡ ತುಂಬಲು ಸಾಧ್ಯವಿಲ್ಲ. ಅವರ ನೆರವಿಗೆ ಬರಲು ನಮಗೆ ಅವಕಾಶ ಇದೆ ಅಷ್ಟೇ. ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದು ಗೀತಾ ಶಿವರಾಜ್​ಕುಮಾರ್​ ಅವರು ಹೇಳಿದ್ದಾರೆ.

Exit mobile version