ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪಂಚಮಸಾಲಿ ವೀರಶೈವ ಲಿಂಗಾಯತ ಮಠವು ಸಜ್ಜಾಗಿದೆ. ಮಧುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಹರಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಜನವರಿ 15ರಂದು ಗುರುವಾರ, ಬೆಳಗ್ಗೆ 9.30ಕ್ಕೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸುಕ್ಷೇತ್ರದಲ್ಲಿ ಹರ ಜಾತ್ರೆಗೆ ವಿಜೃಂಭಣೆಯ ಚಾಲನೆ ಸಿಗಲಿದೆ.
ಹರಜಾತ್ರೆ ಸ್ಮರಣೀಯವಾಗಿಸಲು ಭಕ್ತ ಸಮೂಹವು ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಿದೆ. ಜಾತ್ರೆಯ ಜೊತೆಗೆ ಮಾನವೀಯ ಕಾರ್ಯಗಳಿಗೂ ಮುಂದಾಗಿದೆ ಭಕ್ತ ಸಮೂಹ. ದಾವಣಗೆರೆ ಜಿಲ್ಲೆಯ ಎಲ್ಲಾ ಘಟಕಗಳ ಸಹಯೋಗದೊಂದಿಗೆ ಸುಕ್ಷೇತ್ರದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ.
ಹರಜಾತ್ರಾ ಮಹೋತ್ಸವ-2026ರ ವಿಶೇಷತೆಗಳಲ್ಲಿ ರಕ್ತ ಸಂಗ್ರಹಿಸುವ ಮಾನವೀಯ ಕಾರ್ಯಕ್ಕೆ ಪಂಚಮಸಾಲಿ ವೀರಶೈವ ಲಿಂಗಾಯತ ಸಮಾಜದ ಘಟಕಗಳು ಸಿದ್ಧತೆ ಮಾಡಿಕೊಂಡಿವೆ. ಮಕರ ಸಂಕ್ರಾಂತಿ ಪಾವನಪರ್ವವಾದ ಜನವರಿ 15 ರಂದು ಕಿತ್ತೂರು ರಾಣಿ ಚನ್ನಮ್ಮಾಜೀ ದ್ವಿಶತಮಾನ ವಿಜಯೋತ್ಸವದ ಸಮಾರೋಪ ಸಮಾರಂಭ ಹಾಗೂ ಹರಪೀಠಾಧ್ಯಕ್ಷ ಲಿಂಗೈಕ್ಯ ಜಗದ್ಗುರು ಡಾ.ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 13ನೇಯ ಪುಣ್ಯಸ್ಮರಣೋತ್ಸವ ಮತ್ತು ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳವರ ಅಷ್ಟಮ ವಾರ್ಷಿಕ ಪೀಠಾರೋಹಣವೂ ನೆರವೇರಲಿದೆ.
ಹರಜಾತ್ರೆಯಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳ ಉಳಿವಿಗೆ ಕೈ ಜೋಡಿಸುವಂತೆ ಕರೆ ನೀಡಲಾಗಿದೆ.
ಜಾತ್ರೆಯೆಂದರೆ ಕೇವಲ ವೈಭವವಷ್ಟೇ ಅಲ್ಲ. ಸಮಾಜಮುಖಿ, ಜನೋಪಯೋಗಿ ಕಾರ್ಯಗಳನ್ನು ನಡೆಸಬೇಕು. ರಕ್ತ ಸಂಗ್ರಹಿಸುವುದರಿಂದ ಆಪತ್ತಿನಲ್ಲಿರುವ, ಸಂಕಷ್ಟದಲ್ಲಿರುವ, ತುರ್ತು ಅಗತ್ಯವಿರುವವರಿಗೆ ನೆರವಾಗಬಹುದು. ಈ ಮೂಲಕ
ರಕ್ತದಾನ ಮಾಡಿ ಸಹಾಯ ಮಾಡೋಣ. ಇಂಥ ಒಳ್ಳೆಯ ಕಾರ್ಯದಲ್ಲಿ ಸಮಾಜದವರು, ಭಕ್ತರು ಪಾಲ್ಗೊಂಡು ಪುನೀತರಾಗುವಂತೆ ಮಠದ ಸದ್ಭಕ್ತರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು,
ಪದಾಧಿಕಾರಿಗಳು ಮನವಿ ಮಾಡಿದ್ದಾರೆ.





Leave a comment