Site icon Kannada News-suddikshana

ಕಮಲ ಬಿಟ್ಟು ಹಸ್ತ ಕೈಹಿಡಿದ ಎಂ. ಪಿ. ರೇಣುಕಾಚಾರ್ಯ ಆಪ್ತರು..: ಬಿಜೆಪಿ ವಿರುದ್ಧ ಗುಟುರು..!

SUDDIKSHANA KANNADA NEWS/DAVANAGERE/DATE:24-04-2024

ದಾವಣಗೆರೆ: ಹದಿನೈದು ದಿನಗಳ ಹಿಂದೆ ಮಾಜಿ ಶಾಸಕ ಗುರುಸಿದ್ದನಗೌಡ, ಡಾ. ರವಿಕುಮಾರ್, ಸೋದರರು, ಕೆ. ಪಿ. ಕಲ್ಲಿಂಗಪ್ಪ, ಮಟಿಕಲ್ ವೀರಭದ್ರಸ್ವಾಮಿ ಅವರೂ ಸೇರಿದಂತೆ ಹಲವರು ಸಚಿವ ಎಸ್‌. ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಕೆ. ಪಿ. ಕಲ್ಲಿಂಗಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುಸಿದ್ದನಗೌಡರ ಮನೆಯಲ್ಲಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ದುರ್ವರ್ತನೆ, ಅಹಂಕಾರ, ಹಣದ ಹಮ್ಮು, ಕಾರ್ಯಕರ್ತರ ನಿರ್ಲಕ್ಷ್ಯ, ಸ್ವಂತ ಅಭಿವೃದ್ಧಿಗೆ ಬಳಕೆ
ಮಾಡಿಕೊಂಡಿದ್ದು, ಬಿಜೆಪಿ ಪಕ್ಷಕ್ಕೆ ಅವರ ಕೊಡುಗೆ ಏನೂ ಇಲ್ಲ ಎಂದು ಆರೋಪಿಸಿದರು.

ದಾವಣಗೆರೆ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಸ್ವಂತ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಗುಟ್ಕಾ ಫ್ಯಾಕ್ಟರಿ, ಜ್ಯೂಸ್ ಫ್ಯಾಕ್ಟರಿ, ಜಿಎಂಐಟಿ ಜಿ. ಮಲ್ಲಿಕಾರ್ಜುನಪ್ಪರು ಇದ್ದಾಗ ಕೇವಲ ಆರು ಎಕರೆ ಇತ್ತು‌. ಆದ್ರೆ ಈಗ 70 ಎಕರೆಗೂ
ಹೆಚ್ಚು ಆಗಿದೆ. ಇದು ಆಗಿದ್ದಾದರೂ ಹೇಗೆ? ಬಿಜೆಪಿ ಪಕ್ಷ ಕಟ್ಟಿದ್ದು ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಗುರುಸಿದ್ದನಗೌಡರು, ಕೋಲ್ಕುಂಟೆ ಗೋವಿಂದಪ್ಪ, ಎಂ. ಜಿ‌. ಕಿಣಿ, ಬಿ ಎಂ ಎಸ್ ತಿಮ್ಮಣ್ಣ, ಬಿ. ಬಿ. ಸಾಕ್ರೆ ಸೇರಿದಂತೆ ಹಲವರು‌. ಸಿದ್ದೇಶ್ವರ ಅವರು 20 ವರ್ಷ ಸಂಸದರಾದರೂ ಯಾವುದೇ ಅಭಿವೃದ್ದಿ ಕಾರ್ಯ ಮಾಡದೇ ತನ್ನ ಆಸ್ತಿ ಮಾಡಲು, ಉಳಿಸಿಕೊಳ್ಳಲು ಬಳಸಿದ್ದಾರೆ ಎಂದು ದೂರಿದರು.

ಬಿಜೆಪಿ ಪಕ್ಷದ ಕಾರ್ಯಕರ್ತರು ಬಿಟ್ಟು ಹೋದರೆ ನಷ್ಟ ಇಲ್ಲ ಎಂಬ ದುರಂಹಕಾರದ ಮಾತನಾಡಿದ್ದು ಎಲ್ಲರಿಗೂ ನೆನಪಿದೆ‌. ಬಿಜೆಪಿ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರ ಸ್ವಾಭಿಮಾನ ಕೆಣಕಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಲಕ್ಷಾಂತರ ಕಾರ್ಯಕರ್ತರು ಬಿಜೆಪಿ ಬಿಟ್ಟು ಹೋಗಿದ್ದಾರೆ‌. ದಾವಣಗೆರೆಯಲ್ಲೇ ಮಹಾನಗರ ಪಾಲಿಕೆಯ ಆರು ಸದಸ್ಯರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಗ್ರಾಮೀಣ ಭಾಗದಲ್ಲೂ ದಿನೇ ದಿನೇ ಸೇರುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಖಚಿತ‌. ಸಿದ್ದೇಶ್ವರ ಅವರ ದುರಂಹಕಾರಕ್ಕೆ ದಾವಣಗೆರೆ ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ತಮ್ಮ ಲಿಂಗರಾಜ್ ಅವರಿಗೆ ಟಿಕೆಟ್ ಕೇಳಿದ್ದ ಸಿದ್ದೇಶ್ವರ ಅವರು ಕೊನೆಗೆ ಪತ್ನಿಗೆ ಟಿಕೆಟ್ ಕೊಡಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ. ಜಿಲ್ಲೆಯ ರೈತರ ಬಗ್ಗೆ ಕಾಳಜಿ ತೋರದ ಸಿದ್ದೇಶ್ವರ ಅವರು ಚುನಾವಣೆ ಬಂದಾಗ ನೆನಪಾಗುತ್ತಾರೆ. ಬರಗಾಲ ಬಂದು ರೈತರು ತತ್ತರಿಸಿದ್ದರೂ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲು ಕ್ರಮ ತೆಗೆದುಕೊಳ್ಳಲಿಲ್ಲ ಎಂದು ದೂರಿದರು.

ಗೋಷ್ಠಿಯಲ್ಲಿ ಮಟಿಕಲ್ ವೀರಭದ್ರಸ್ವಾಮಿ, ಆರ್. ಪ್ರತಾಪ್, ಗುಡ್ಯಪ್ಪ, ಶಾಂತಾ ಬಾಯಿ, ಅಣಜಿ ಬಸವರಾಜ್ ಮತ್ತಿತರರು ಹಾಜರಿದ್ದರು.

Exit mobile version