ಗುವಾಹಟಿ: ಅಸ್ಸಾಂನ ಗುವಾಹಟಿಯ ಖಾನಾಪಾರ ಪ್ರದೇಶದಲ್ಲಿರುವ ‘ಲೋಕಲ್ಸ್’ ಕೆಫೆ ಮತ್ತು ಲೌಂಜ್ ನೈಟ್ಕ್ಲಬ್ನಲ್ಲಿ ಯುವತಿಯೊಬ್ಬಳನ್ನು ಬೆತ್ತಲೆಗೊಳಿಸಿ ಕ್ರೂರವಾಗಿ ಹಲ್ಲೆ ನಡೆಸಿದ ಅತ್ಯಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಗುರುವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಟ್ಟೆಯಿಲ್ಲದೆ ನೆಲದ ಮೇಲೆ ಬಿದ್ದಿರುವ ಯುವತಿಗೆ ಇಬ್ಬರು ಮಹಿಳೆಯರು ಮತ್ತು ಕೆಲವು ಪುರುಷರು ಕಾಲಿನಿಂದ ಒದೆಯುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ನೈಟ್ಕ್ಲಬ್ನ ಮಹಿಳಾ ಮತ್ತು ಪುರುಷ ಬೌನ್ಸರ್ಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ.
ನಾಲ್ಕನೇ ಮಹಡಿಯಿಂದ ಯುವತಿಯನ್ನು ತಳ್ಳಿ, ಆಕೆಯ ಮೇಲೆ ಹಲ್ಲೆ ನಡೆಸಿ ನಂತರ ಕೆಳಗಿನ ಪಾರ್ಕಿಂಗ್ ಪ್ರದೇಶಕ್ಕೆ ಎಳೆದು ತರಲಾಗಿದೆ. ಘಟನೆಗೆ ನಿಖರವಾದ ಕಾರಣ ಅಥವಾ ಗಲಾಟೆಗೆ ಏನು ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ಕುರಿತು ಮಾಧ್ಯಮದವರು ಸ್ಥಳಕ್ಕೆ ತೆರಳಿದಾಗ ಕೆಫೆ ಸಂಪೂರ್ಣ ಬಂದ್ ಆಗಿತ್ತು.
ಘಟನೆಗೆ ಸಂಬಂಧಿಸಿದಂತೆ ಗುವಾಹಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.





Leave a comment