ದಾವಣಗೆರೆ: ವಿಧಾನಸಭೆ ಅಧಿವೇಶನದಲ್ಲಿ ಸಂಪೂರ್ಣ ಭಾಷಣ ಮಾಡದೇ ಹಾಗೆ ಹೋದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ವರ್ತನೆ ಸಂವಿಧಾನ ವಿರೋಧಿ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಕಿಡಿಕಾರಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರದ ಏಜೆಂಟ್ ರಂತೆ ವರ್ತಿಸದೇ ರಾಜ್ಯಪಾಲರು ಸಾಂವಿಧಾನಿಕವಾಗಿ ನಡೆದುಕೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಅಪಮಾನಿಸುವ ಮತ್ತು ಕನ್ನಡಿಗರಿಗೆ ನೋವು ತರುವ ರೀತಿಯಲ್ಲಿ ವರ್ತನೆ ಮಾಡಿರುವುದು ಖಂಡನೀಯ. ಕೇವಲ ಎರಡೇ ನಿಮಿಷಕ್ಕೆ ಭಾಷಣ ಮುಗಿಸಿ ಕೇಂದ್ರದ ಅಣಂತಿಯಂತೆ ನಡೆದುಕೊಂಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಯ್ದೆ ರದ್ದುಗೊಳಿಸಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ಸಣ್ಣ ರೈತರ, ಮಹಿಳೆಯರ ಉದ್ಯೋಗದ ಮತ್ತು ನಿರುದ್ಯೋಗ ಭತ್ಯೆಯ
ಹಕ್ಕು ಕಸಿದುಕೊಂಡಿದೆ. ಗ್ರಾಮೀಣ ಭಾರತದ ಅಭಿವೃದ್ಧಿ ಪರ್ವದ ಬೃಹತ್ ಅಧ್ಯಾಯವಾಗಿದ್ದ “ಮನರೇಗಾ” ಕಾಯ್ದೆಯ ರದ್ಧತಿಯ ಮೂಲಕ ಭಾರತೀಯ ಗ್ರಾಮೀಣ ಬದುಕನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ʼವಿಬಿ ಗ್ರಾಮ್ ಜಿʼ ಯೋಜನೆಯಡಿ ರಾಜ್ಯ ಸರ್ಕಾರಗಳಿಗೆ ಅನುದಾನ ಕಡಿತಗೊಳಿಸುವ ಅಪಾಯ ಇದೆ. ಕೇಂದ್ರ ಸರ್ಕಾರವು ತಂದಿರುವ ಗುತ್ತಿಗೆದಾರ ಕೇಂದ್ರಿತ, ಬೃಹತ್ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸುವ “ವಿಬಿ ಗ್ರಾಮ್ ಜಿ” ಕಾನೂನನ್ನು ಕೂಡಲೇ ಕೇಂದ್ರ ಸರ್ಕಾರವು ರದ್ದುಪಡಿಸಬೇಕು. ಬಡವರ, ಕೃಷಿ ಕಾರ್ಮಿಕರ, ಗ್ರಾಮೀಣ ಆಸ್ತಿ ಸೃಜನೆಗೆ ಅವಕಾಶ ಕಲ್ಪಿಸುವ, ನಿರುದ್ಯೋಗಿ ಭತ್ಯೆ ಒದಗಿಸುವ ಕಾರ್ಮಿಕರು ಅವರಿರುವ ಸ್ಥಳದಲ್ಲಿಯೇ ಕೆಲಸ ಒದಗಿಸುವ “ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ” ಮರು ಸ್ಥಾಪಿಸಲೇಬೇಕು. ಇಲ್ಲದಿದ್ದರೆ ಕಾಂಗ್ರೆಸ್ ದೇಶಾದ್ಯಂತ ಬೃಹತ್ ಹೋರಾಟ ನಡೆಸಲಿದೆ. ಈ ಮೂಲಕ ಕೇಂದ್ರ ಸರ್ಕಾರದ ಜನ, ಬಡ, ಕಾರ್ಮಿಕರ ವಿರೋಧಿ ನೀತಿಗಳನ್ನು ಅರಿತು ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.





Leave a comment