ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ರೋಗಗ್ರಸ್ತ ಆಡಳಿತದಿಂದಾಗಿ ಜನಸಾಮಾನ್ಯರ ಜೊತೆಗೆ ಸರ್ಕಾರಿ ಸೇವಕರು ಕೂಡ ಹೈರಾಣಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ದಿವಾಳಿ ಅಂಚಿನಲ್ಲಿರುವ ಕಾಂಗ್ರೆಸ್ ಸರ್ಕಾರ ಆರೋಗ್ಯ ಸೇವೆಯ ಬೆನ್ನೆಲುಬಾದ 30,000 ನರ್ಸ್ ಗಳಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಲಾಗದೆ ಅಮಾನವೀಯವಾಗಿ ವರ್ತಿಸುತ್ತಿದೆ. ಇನ್ನೊಂದೆಡೆ, 980 ಗ್ರಾಮ ಪಂಚಾಯತ್ ಪಿಡಿಒ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಲು ಸಾಧ್ಯವಾಗದೆ ಗ್ರಾಮೀಣಾಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆರೋಪಿಸಿದ್ದಾರೆ.
ಬರೀ ಭ್ರಷ್ಟಾಚಾರ, ಓಲೈಕೆ ರಾಜಕೀಯ, ಪ್ರಚಾರದ ಗ್ಯಾರಂಟಿ, ಕುರ್ಚಿ ಕಾಳಗ, ಕೇಂದ್ರದ ಜೊತೆಗೆ ರಾಜಕೀಯ ಸಂಘರ್ಷಗಳಲ್ಲೇ ಮಗ್ನವಾಗಿರುವ ಸರ್ಕಾರಕ್ಕೆ ಜನರ ನಿಜವಾದ ನೋವುಗಳು ಕಾಣಿಸುತ್ತಿಲೇ ಇಲ್ಲ. ಶ್ರಮಜೀವಿಗಳಿಗೆ ಅದರಲ್ಲೂ ಆರೋಗ್ಯ ಸೇವೆಯಲ್ಲಿರುವವರಿಗೆ ಕನಿಷ್ಠ ಸಂಬಳ ನೀಡಲಾಗದೆ ಇರುವುದು ನಾಚಿಕೆಗೇಡು ಎಂದು ಹೇಳಿದ್ದಾರೆ.
ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬಾಕಿ ವೇತನ ಬಿಡುಗಡೆ ಮಾಡಲಿ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಜಡಗಟ್ಟಿರುವ ಆಡಳಿತ ಯಂತ್ರಕ್ಕೆ ಸ್ವಲ್ಪವಾದರೂ ಜೀವ ತುಂಬಲಿ. ಶ್ರಮಿಕರ ಕಣ್ಣೀರು ಮತ್ತು ಹಳ್ಳಿಗಳ ಅಭಿವೃದ್ಧಿಯ ನಿರ್ಲಕ್ಷ್ಯಕ್ಕೆ ಈ ಕಾಂಗ್ರೆಸ್ ಸರ್ಕಾರ ಹೊಣೆ ಹೊರಲೇಬೇಕು ಎಂದು ಒತ್ತಾಯಿಸಿದ್ದಾರೆ.





Leave a comment