SUDDIKSHANA KANNADA NEWS/DAVANAGERE/DATE:25_09_2025
ದಾವಣಗೆರೆ: ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಜೋಳ, ರಾಗಿ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ಹೃದಯಾಘಾತಕ್ಕೆ ಬಲಿ: ಸ್ನೇಹಪರ ಜೀವಿಯ ಯಶೋಗಾಥೆ ಕಂಪ್ಲೀಟ್ ಡೀಟೈಲ್ಸ್
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2025-26 ನೇ ಸಾಲಿನ ಋತುವಿನಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ ಮತ್ತು ಬಿಳಿ ಜೋಳ ಖರೀದಿಗೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೋಳ:
ಇದರಲ್ಲಿ ಬಿಳಿಜೋಳ ಹೈಬ್ರೀಡ್ ಕ್ವಿಂಟಾಲ್‍ಗೆ ರೂ.3699 ಮತ್ತು ಬಿಳಿಜೋಳ ಮಾಲ್ದಂಡಿ ಕ್ವಿಂಟಾಲ್‍ಗೆ ರೂ.3749 ಗಳ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತದೆ. ಇದಕ್ಕಾಗಿ 2025 ರ ಡಿಸೆಂಬರ್ 1 ರಿಂದ 2026 ರ ಮಾರ್ಚ್ 31 ರ ವರೆಗೆ ರೈತರಿಂದ ನೊಂದಣಿ ಮಾಡಿ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಲಾಗುತ್ತದೆ. ಪ್ರತಿ ರೈತರಿಂದ ಹಿಡುವಳಿಯನ್ನಾಧರಿಸಿ ಪ್ರತಿ ಎಕರೆಗೆ 15 ಕ್ವಿಂಟಾಲ್‍ನಂತೆ ಗರಿಷ್ಠ 150 ಕ್ವಿಂಟಾಲ್ ಬಿಳಿಜೋಳ ಖರೀದಿ ಮಾಡಲಾಗುತ್ತದೆ.
ರಾಗಿ:
ರಾಗಿಯನ್ನು ಕ್ವಿಂಟಾಲ್‍ಗೆ ರೂ.4886 ಗಳ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಿದ್ದು 2025 ರ ಅಕ್ಟೋಬರ್ 1 ರಿಂದ ಡಿಸೆಂಬರ್ 15 ರವರೆಗೆ ರೈತರಿಂದ ನೊಂದಣಿ ಆರಂಭವಾಗಲಿದೆ. ನೊಂದಣಿಯಾದ ರೈತರಿಂದ 2026 ರ ಜನವರಿ 1 ರಿಂದ ಮಾರ್ಚ್ 31 ರ ವರೆಗೆ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಲಾಗುತ್ತದೆ. ಪ್ರತಿ ರೈತರಿಂದ ಹಿಡುವಳಿಯನ್ನಾಧರಿಸಿ ಎಕರೆಗೆ 10 ಕ್ವಿಂಟಾಲ್‍ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡಲಾಗುತ್ತದೆ.
ಭತ್ತ:
ಇದರಲ್ಲಿ ಸಾಮಾನ್ಯ ತಳಿ ಭತ್ತ ಕ್ವಿಂಟಾಲ್‍ಗೆ ರೂ.2369 ಮತ್ತು ಎ.ಗ್ರೇಡ್ ಭತ್ತ ಕ್ವಿಂಟಾಲ್‍ಗೆ ರೂ.2389 ಗಳಂತೆ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿ ಮಾಡಲಾಗುತ್ತದೆ. ರೈತರ ನೊಂದಣಿ ಆರಂಭವಾಗಿದ್ದು ಅಕ್ಟೋಬರ್ 31 ರವರೆಗೆ ನೊಂದಣಿ ಮಾಡಿ 2025 ರ ನವೆಂಬರ್ 1 ರಿಂದ 2026 ರ ಫೆಬ್ರವರಿ 28 ರ ವರೆಗೆ ಖರೀದಿ ಮಾಡಲಾಗುತ್ತದೆ. ಪ್ರತಿ ರೈತರಿಂದ ಹಿಡುವಳಿಯನ್ನಾಧರಿಸಿ ಎಕರೆಗೆ 25 ಕ್ವಿಂಟಾಲ್‍ನಂತೆ ಗರಿಷ್ಠ 50 ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗುತ್ತದೆ.
ಖರೀದಿ ಮಾಡಿದ ರೈತರಿಗೆ ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ರೈತರಿಗೆ ನೊಂದಣಿಗೆ ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಡಲು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಸಿದ್ದತೆ ನಡೆಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಹಾರ ಇಲಾಖೆ ಅಧಿಕಾರಿಗಳು ಖರೀದಿ ಕೇಂದ್ರಗಳ ನೋಡಲ್ ಅಧಿಕಾರಿಗಳಾಗಿರುತ್ತಾರೆ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂಧನ್, ಕೃಷಿ ಇಲಾಖೆಯ ಅಧಿಕಾರಿ, ಎಪಿಎಂಸಿ ಕಾರ್ಯದರ್ಶಿಗಳು, ಕೆಎಫ್‍ಸಿಎಸ್‍ಸಿ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.