SUDDIKSHANA KANNADA NEWS/ DAVANAGERE/ DATE:29_07_2025
ದಾವಣಗೆರೆ: ತೆರೆಮರೆಯಲ್ಲಿ ದುಡಿಯುತ್ತಾ ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿದ ಕರುನಾಡಿನ ಸಾಧಕರನ್ನು ಜಗತ್ತಿಗೆ ಪರಿಚಯಿಸುವ ಸಲುವಾಗಿ “ವಿಶ್ವವಾಣಿ ಪತ್ರಿಕೆ ಪ್ರತಿವರ್ಷ ನೀಡುತ್ತಿರುವ “ಗ್ಲೋಬಲ್ ಅಚೀವರ್ಸ್ ಅವಾರ್ಡ್”ಗೆ ದಾವಣಗೆರೆ ಜಿಲ್ಲೆಯ ಹರಿಹರದ ಸಮಾಜಸೇವಕ ಅಮರಾವತಿ ಪರಮೇಶ್ವರಪ್ಪ ಆಯ್ಕೆಯಾಗಿದ್ದಾರೆ.
ಭೂತಾನ್ ದೇಶದ “ಥಿಂಪು”ವಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಮರಾವತಿ ಪರಮೇಶ್ವರಪ್ಪ “2025ರ ಗ್ಲೋಬಲ್ ಅಚೀವರ್ಸ್” ಅವಾರ್ಡ್ ಸ್ವೀಕರಿಸಲಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿ, ಬಿಕಾಂ ಪದವೀಧರರಾದ
ಶ್ರೀಯುತರು 5 ವರ್ಷಗಳ ಕಾಲ ಹನಗವಾಡಿ ಮಂಡಲ ಪ್ರಧಾನರಾಗಿ, ಗ್ರಾಮರಕ್ಷಕ ದಳದ ದಳಪತಿಯಾಗಿ ಮಾಡಿದ ಸೇವೆ ಅನನ್ಯ.
ಅಮರಾವತಿಯಲ್ಲಿ ಶ್ರೀ ಸಾಯಿ, ಶ್ರೀಬಸವ ದೇವಸ್ಥಾನ ನಿರ್ಮಾಣಕ್ಕೆ 10 ಗುಂಟೆ ಜಾಗ ಉಚಿತವಾಗಿ ನೀಡಿದ್ದಲ್ಲದೇ ತಾವೇ ಸುಮಾರು ಕೋಟಿ ರೂ. ಹಣ ವೆಚ್ಚ ಮಾಡಿ ಸುಸಜ್ಜಿತ ದೇವಸ್ಥಾನ ನಿರ್ಮಿಸಿ ಭಕ್ತಿಯ ಪರಕಾಷ್ಠೆ ಮೆರೆದಿದ್ದಾರೆ.
ಮಂಡಲ ಪ್ರಧಾನರಾಗಿದ್ದಾಗ ಸುಮಾರು 800 ಜನರಿಗೆ ಭೂಮಿ, ವಸತಿ ರಹಿತರಿಗೆ ಸರ್ಕಾರಿ ಜಾಗ ಗುರುತಿಸಿ ಮನೆ ನಿರ್ಮಿಸಿಕೊಟ್ಟಿದ್ದರು. ಸಾಹಿತ್ಯಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾಯಕ ನಿಷ್ಟರಾಗಿ,
ಜನಪರ ಹಾದಿಯಲ್ಲಿ ಕೀರ್ತಿ ಗಳಿಸಿದ ಅಮರಾವತಿ ಪರಮೇಶ್ವರಪ್ಪ ಅವರ ವ್ಯಕ್ತಿತ್ವದ ಹಿರಿಮೆ, ಸೇವಾ ಮನೋಭಾವ, ಅಮೂಲ್ಯವಾದುದು.
ಬೇಡಿ ಬಂದ ಬಡವರ, ಶೋಷಿತರ ಬಗ್ಗೆ ಅಪಾರ ಕಾಳಜಿಯೊಂದಿಗೆ ತಮ್ಮ ಕೈಲಾದಷ್ಟು ನೆರವಿಗೆ ಸಹಕಾರ ನೀಡುತ್ತಾ ಚೈತನ್ಯದ ಚಿಲುಮೆಯಾಗಿದ್ದಾರೆ. ಓಂ ಶ್ರೀ ಸಾಯಿ ಶ್ರೀ ಬಸವ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ನಿರ್ದೇಶಕರಾಗಿ, ಮಾರುತಿ, ಗಣೇಶ ಮಂದಿರ ದೇವಸ್ಥಾನ ಮಂಡಳಿ ಟ್ರಸ್ಟಿಯಾಗಿ, ಕಸಾಪ ಸದಸ್ಯರಾಗಿ, ಸಾಧು ವೀರಶೈವ ಸಮಾಜದ ನಿರ್ದೇಶಕರಾಗಿ, ಎಪಿಎಂಸಿ ನಾಮನಿರ್ದೇಶನ ಸದಸ್ಯರಾಗಿ, ಶ್ರೀ ಮಲ್ಲಿಕಾರ್ಜುನ ರೈತ ಯುವಕರ ಸಂಘದ ಅಧ್ಯಕ್ಷರಾಗಿ ಹಾಗೂ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.