Site icon Kannada News-suddikshana

ಮಂಗಳೂರು: ಪ್ರಧಾನಿ ಮೋದಿಯಿಂದ ಬಿಡುಗಡೆಯಾಗಲಿದೆ ಪುತ್ತೂರಿನ ಎರಡು ಗೇರು ತಳಿಗಳು

ಮಂಗಳೂರು: ಕೇಂದ್ರ ಸರಕಾರ ನೂರು ದಿನಗಳನ್ನು ಪೂರೈಸುತ್ತಿರುವ ಹೊತ್ತಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ಎರಡು ಸುಧಾರಿತ ಗೇರು ಹೈಬ್ರಿಡ್ ತಳಿಗಳಾದ ನೇತ್ರಾ ಜಂಬೋ-1 ಮತ್ತು ನೇತ್ರಾ ಗಂಗಾ ತಳಿಗಳು ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ಮೋದಿಯವರಿಂದ ಆಗಸ್ಟ್ ಎರಡನೇ ವಾರದಲ್ಲಿ, ನೂರನೇ ದಿನಗಳ ಕಾರ್ಯಕ್ರಮ ನಡೆಯಲಿದೆ.

ವಿವಿಧ ವಾರ್ಷಿಕ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಒಟ್ಟು 109 ಸುಧಾರಿತ, ಹವಾಮಾನ ಬದಲಾವಣೆಗೆ ಸ್ಪಂದಿಸುವ, ಪೋಷಕಾಂಶ ಸಮೃದ್ಧ ತಳಿಗಳು ಲೋಕಾರ್ಪಣೆಗೊಳ್ಳಲಿದೆ. ಇದು ಕೇಂದ್ರ ಸರ್ಕಾರ 100 ದಿನಗಳನ್ನು ಪೂರೈಸುತ್ತಿರುವ ಸಂದರ್ಭ ಬಿಡುಗಡೆಯಾಗಲಿದೆ. ನೇತ್ರಾ ಜಂಬೋ-1 ತಳಿಯನ್ನು ಸಂಸ್ಥೆಯ ಈಗಿನ ನಿರ್ದೇಶಕ ಡಾ. ದಿನಕರ ಅಡಿಗ ಮತ್ತವರ ತಂಡ ಅಭಿವೃದ್ಧಿಪಡಿಸಿದೆ.

ಈ ತಳಿ ಕೂಲಿ ಖರ್ಚನ್ನು ಗಮನಾರ್ಹ ಪ್ರಮಾಣದಲ್ಲಿ ಉಳಿಸುತ್ತದೆ. ಇದರಲ್ಲಿ 12 ಗ್ರಾಂ ತೂಕದ ಬೀಜಗಳಿರುತ್ತವೆ. ಶೇಕಡಾ 90ಕ್ಕೂ ಹೆಚ್ಚಿನ ಬೀಜಗಳದ್ದು ಒಂದೇ ಗಾತ್ರ. ನೂರು ಕೆಜಿ ಬೀಜ ಸಂಸ್ಕರಣೆಯಿಂದ ಸುಮಾರು 29 ರಿಂದ 30 ಕೆಜಿ ತಿರುಳು ಸಿಗುತ್ತದೆ. ಈಗಿರುವ ರಫ್ತು ಗುಣಮಟ್ಟದ ಗ್ರೇಡ್ ಡಬ್ಲ್ಯೂ 180ಕ್ಕಿಂತ ಜಾಸ್ತಿ ಗ್ರೇಡ್ (ಡಬ್ಲ್ಯೂ 130) ಈ ತಳಿಯ ತಿರುಳಿನದ್ದು ಆಗಿದೆ. ಈಗಿನ ಮಾರುಕಟ್ಟೆ ದರದಲ್ಲಿ ದೊಡ್ಡ ಗಾತ್ರದ ಬೀಜಕ್ಕೆ ಒಂದು ಟನ್ನಿಗೆ ಸುಮಾರು 10000 ರೂ ಜಾಸ್ತಿ ಸಿಗುತ್ತದೆ.

ಒಟ್ಟು 26000 ರೂಗಳಷ್ಟು ಹೆಚ್ಚುವರಿ ಲಾಭ ಒಂದು ಟನ್ನಿಗೆ ಸಿಗುತ್ತದೆ. ಇದರ ತಿರುಳಿನ ಸಿಪ್ಪೆ ಸುಲಭದಲ್ಲಿ ಬಿಡಿಸಬಹುದು. ಹಾಗಾಗಿ ಕಾರ್ಖಾನೆಯಲ್ಲೂ ಕೂಲಿ ಖರ್ಚು ಉಳಿಸುತ್ತದೆ. ಜೊತೆಗೆ ತಿರುಳು ತುಂಬಾ ರುಚಿಕರವಾಗಿದೆ ಎನ್ನಲಾಗಿದೆ. ನೇತ್ರಾ ಗಂಗಾ ತಳಿಯನ್ನು ಹಿಂದಿನ ಪ್ರಭಾರ ನಿರ್ದೇಶಕರಾದ ಡಾ. ಗಂಗಾಧರ ನಾಯಕ್ ಮತ್ತವರ ತಂಡ ಅಭಿವೃದ್ಧಿಪಡಿಸಿದೆ. ಇದು ದೊಡ್ಡ ಗಾತ್ರದ ಬೀಜವನ್ನು (12 ರಿಂದ 13 ಗ್ರಾಂ), ಗೊಂಚಲುಗಳಲ್ಲಿ ಬಿಡುವ ತಳಿಯಾಗಿದ್ದು ಉತ್ತಮ ಫಸಲನ್ನು ಕೊಡುತ್ತದೆ.

ಪ್ರಾರಂಭದ ಒಂದೆರಡು ವರ್ಷಗಳಲ್ಲೇ ಹೂ ಬಿಡುವ ಹಾಗೂ ದೀರ್ಘಾವಧಿ (ಡಿಸೆಂಬರ್ ನಿಂದ ಏಪ್ರಿಲ್ ತನಕ) ಹೂವು ಮತ್ತು ಗೇರು ಬೀಜ ಬಿಡುವ ತಳಿ. ತಿರುಳಿನ ಪ್ರಮಾಣ ಶೇಕಡಾ 29.5% ಇರುತ್ತದೆ. ಮೂರನೆ ವರ್ಷದಲ್ಲಿಯೇ ಗಿಡವೊಂದಕ್ಕೆ 5 ಕೆಜಿಗಿಂತ ಮೇಲ್ಪಟ್ಟು ಇಳುವರಿ ಕೊಡುತ್ತದೆ ಎಂದು ಪ್ರಕಟನೆ ತಿಳಿಸಿದೆ.

Exit mobile version