Home ದಾವಣಗೆರೆ ರಾಜಕಾರಣಿಗಳಿಗೆ ಪಾಳೇಗಾರಿಕೆ ನಡೆಸಲು ಅಸ್ತ್ರವಾಗಿರುವ “ಅಸಮಾನತೆ” ತೊಲಗಬೇಕು: ಜಿ. ಬಿ. ವಿನಯ್ ಕುಮಾರ್ ಅಭಿಮತ
ದಾವಣಗೆರೆಬೆಂಗಳೂರು

ರಾಜಕಾರಣಿಗಳಿಗೆ ಪಾಳೇಗಾರಿಕೆ ನಡೆಸಲು ಅಸ್ತ್ರವಾಗಿರುವ “ಅಸಮಾನತೆ” ತೊಲಗಬೇಕು: ಜಿ. ಬಿ. ವಿನಯ್ ಕುಮಾರ್ ಅಭಿಮತ

Share
ಅಸಮಾನತೆ
Share

ದಾವಣಗೆರೆ: ಎಲ್ಲಿಯವರೆಗೆ ಅಸಮಾನತೆ ಸಮಾಜದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ರಾಜಕಾರಣಿಗಳಿಗೆ ಪಾಳೇಗಾರಿಕೆ ನಡೆಸಲು ವರ ಇದ್ದಂತೆ. ಈ ಅಸಮಾನತೆ ತೊಲಗಲು ಹಿಂದುಳಿದ, ಅಲ್ಪಸಂಖ್ಯಾತ, ಶೋಷಿತರು ಒಟ್ಟಾಗಿ ಹೋರಾಟ ನಡೆಸಬೇಕಾದ ಅಗತ್ಯತೆ ಒದಗಿ ಬಂದಿರುವುದು ಬೇಸರದ ಸಂಗತಿ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದ್ದಾರೆ.

ಜಿಲ್ಲೆಯ ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹಮಠದಲ್ಲಿ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವ -2026 ಪ್ರಯುಕ್ತ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು “ಸಂವಿಧಾನ ; ಬಹುತ್ವದ ಆತ್ಮ! ಈ ಆಶಯಗಳನ್ನು” ಎತ್ತಿ ಹಿಡಿಯುವಲ್ಲಿ ವಿದ್ಯಾರ್ಥಿ ಯುವ ಜನರ ಜವಾಬ್ದಾರಿ ಎಂಬ ವಿಷಯದ ಕುರಿತಂತೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಪಾಳೇಗಾರಿಕೆ ಸಂಸ್ಕೃತಿ ಎನ್ನುವುದು ಹಾಸುಹೊಕ್ಕಾಗಿದೆ ಎಂದು ತಿಳಿಸಿದರು.

ರಾಜಕೀಯ ಪಾಳೇಗಾರಿಕೆ ಮತ್ತು ಅಸಮಾನತೆ

ಅಧಿಕಾರದಲ್ಲಿರುವ, ಪಾಳೇಗಾರಿಕೆ ಸಂಸ್ಕೃತಿ ಪೋಷಿಸಿ ಬೆಳೆಸುವ, ಸಾಮ್ರಾಜ್ಯವನ್ನೇ ಕಟ್ಟಿಕೊಂಡಿರುವ ಶ್ರೀಮಂತ ರಾಜಕಾರಣಿಗಳಿಗೆ ಚುನಾವಣೆ ಬಂದಾಗ ಜನರು ನೆನಪಾಗುತ್ತಾರೆ. ಆಗ ಅಧಿಕಾರದಲ್ಲಿರುವ ದೊಡ್ಡ ರಾಜಕಾರಣಿಗಳು
ಬಡವರಿಗೆ ದಾನ ಮಾಡುವುದು, ದೇವಸ್ಥಾನಕ್ಕೆ ದೇಣಿಗೆ ನೀಡುವುದು, ಶಾಲೆಗಳನ್ನು ಮಂಜೂರು ಮಾಡುವುದು ಸೇರಿದಂತೆ ಅಲ್ಪ ತೃಪ್ತಗೊಳ್ಳುವಂಥ ಸಹಾಯ ಮಾಡುತ್ತಾರೆ. ಇದು ಗೆಲ್ಲುವವರೆಗೆ ಮಾತ್ರ. ಅಸಮಾನತೆ ಇದ್ದರಷ್ಟೇ ಗೆದ್ದ ಬಳಿಕ ತಮಗೆ ಬೇಕಾದ ಹಾಗೆ ಅಧಿಕಾರ ಬಳಕೆ ಮಾಡಿಕೊಳ್ಳಲು ಸಾಧ್ಯ ಎಂಬ ಅರಿವು ಅವರಿಗಿರುತ್ತದೆ. ಹಾಗಾಗಿ, ಅಸಮಾನತೆ ಜೀವಂತವಾಗಿಡಲು ಪ್ರಯತ್ನಿಸುತ್ತಾರೆ. ಇದಕ್ಕೆ ಆಸ್ಪದ ನೀಡದೇ ಒಟ್ಟಾಗಿ ಹೋರಾಟ ಮಾಡಬೇಕಾದ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸಂವಿಧಾನ ಮತ್ತು ಯುವಜನರ ಜವಾಬ್ದಾರಿ

ಕಷ್ಟ ಬಂದಾಗ ನಾವು ನಿಮಗೆ ಸ್ಪಂದಿಸಬೇಕು, ನಮಗೆ ಕಷ್ಟ ಬಂದಾಗ ನೀವೂ ಸ್ಪಂದಿಸುವಂತಾಗಬೇಕು. ಯಾವ ಜಾತಿಯೂ ಮೇಲಲ್ಲ, ಯಾವ ಜಾತಿಯೂ ಕೀಳಲ್ಲ. ನನ್ನ ಜಾತಿ ಶ್ರೇಷ್ಠ ಎಂಬ ಮನೋಭಾವನೆ ಭ್ರಾತೃತ್ವಕ್ಕೆ ವಿರುದ್ಧವಾದದ್ದು. ನನ್ನಲ್ಲಿ
ಹಣ ಜಾಸ್ತಿ ಇದೆ, ದಾನ, ಸಹಾಯ ಮಾಡ್ತೇನೆಂಬುದು ಭ್ರಾತೃತ್ವ ಅಲ್ಲ. ಏಳಿಗೆ, ಅಭಿವೃದ್ಧಿ, ಸಮಾಜದ ಮುಖ್ಯವಾಹಿನಿಗೆ ತರುವಂಥ ದೊಡ್ಡ ಮಟ್ಟದ ಕೆಲಸಗಳಾಗಬೇಕು. ಸಮಾನತೆ ಇದ್ದು ಸ್ವಾತಂತ್ರ್ಯ ಸಿಗದಿದ್ದರೆ ಪ್ರಯೋಜನ ಶೂನ್ಯ. ಸಮಾನತೆ
ಮತ್ತು ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸೃಜನಶೀಲತೆ ಇರುತ್ತದೆ. ಬುದ್ದಿವಂತಿಕೆಯೂ ನಿಮ್ಮಲ್ಲಿರುತ್ತದೆ. ಮಹಾತ್ವಾಕಾಂಕ್ಷೆಯೂ ಇರುತ್ತೆ. ಆದರೆ ಸ್ವಾತಂತ್ರ್ಯ ಸಿಗದಿದ್ದರೆ ಸಾಧನೆ ಮಾಡಲು ಸಾಧ್ಯವಾಗದು. ಹಾಗಾಗಿ, ಸ್ವಾತಂತ್ರ್ಯವೂ ಸಿಗಬೇಕು. ಸಮಾನತೆಯೂ ಇರುವಂತ ವಾತಾವರಣ ನಿರ್ಮಾಣವಾದಾಗ ಮಾತ್ರ ಭ್ರಾತೃತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.

ನ್ಯಾಯಾಂಗ ಮತ್ತು ಶಿಕ್ಷಣದಲ್ಲಿನ ಅಸಮಾನತೆ

ಕಡುಬಡತನದಿಂದ ಬಂದವರಿಗೆ ವಿಧಾನಸಭೆ, ಲೋಕಸಭೆ ಚುನಾವಣೆಗೆ ಅವಕಾಶ ಕೊಡಲ್ಲ. ಎಲ್ಲಿ ಬೆಳೆದುಬಿಡುತ್ತಾರೋ, ಒಳ್ಳೆಯ ಕೆಲಸ ಮಾಡಿ ಜನರ ಮೆಚ್ಚುಗೆ ಗಳಿಸಿಬಿಡುತ್ತಾರೋ ಎಂಬ ಆತಂಕ ಪಾಳೇಗಾರಿಕೆ ನಡೆಸುವವರಿಗೆ ಯಾವಾಗಲೂ ಇರುತ್ತದೆ. ಹಾಗಾಗಿ ಅವಕಾಶ ಸಿಗದಂತೆ ಮಾಡುತ್ತಾರೆ. ಅವಕಾಶ ವಂಚಿತರಿಗೆ ಅವಕಾಶ ನೀಡಬೇಕೆಂಬ ಹೃದಯವೈಶಾಲ್ಯತೆ ದೊಡ್ಡ ನಾಯಕರಲ್ಲಿ ಇರಲ್ಲ ಎಂಬು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿರುವ ಶೇಕಡಾ 80 ರಷ್ಟು ಮಂದಿ ಮೇಲ್ವರ್ಗದಿಂದ ಬಂದವರೇ. ಇದಕ್ಕೆ ಕಾರಣ ಅವರಿಗೆ ಚಿಕ್ಕವಯಸ್ಸಿನಲ್ಲಿ ಸಿಕ್ಕ ಉತ್ಕೃಷ್ಟ ಶಿಕ್ಷಣ. ಅದೇ ರೀತಿಯಲ್ಲಿ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಓದಿರುತ್ತಾರೆ. ಆದರೆ,
ಶೋಷಿತರು, ಬಡವರು, ಅಲ್ಪಸಂಖ್ಯಾತರಿಗೆ ಈ ಅವಕಾಶಗಳು ಸಿಗುವುದು ಕಡಿಮೆ. ಇದುವರೆಗೆ ಎಸ್ಸಿ ಸಮಾಜದಿಂದ ಕೇವಲ ಆರು ಮಂದಿ ಮಾತ್ರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದಾರೆ, ಎಸ್ಟಿಯಿಂದ ಒಬ್ಬರೇ ಒಬ್ಬರು ಮಾತ್ರ ಪೀಠ ಅಲಂಕರಿಸಿದ್ದಾರೆ. ಮುಸ್ಲಿಂ ಜನಾಂಗದಿಂದ ನಾಲ್ವರು ಮಾತ್ರ ಸುಪ್ರೀಂಕೋರ್ಟ್ ಜಡ್ಜ್ ಆಗಿದ್ದಾರೆ. ಮುಂದುವರಿದ ಜನಾಂಗದವರದ್ದೇ ಸಿಂಹಪಾಲು. ಎಲ್ಲಾ ವರ್ಗದವರಿಗೆ ಉತ್ತಮ ಅವಕಾಶಗಳು ಸಿಕ್ಕರೆ ಈ ಹುದ್ದೆಗೇರಲು ಕಷ್ಟವಾಗದು ಎಂದು ಹೇಳಿದರು.

ದಾವಣಗೆರೆ, ಚಿತ್ರದುರ್ಗದಲ್ಲಿ ಓದುವ ಕಾನೂನು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಹೋಗುವಂತ ವ್ಯವಸ್ಥೆ ಇದೆ. ಈ ವ್ಯವಸ್ಥೆ ಅರ್ಥ ಮಾಡಿಕೊಳ್ಳದೇ ಬದುಕುತ್ತಿದ್ದೇವೆ. ಸಂವಿಧಾನ ಪೀಠಿಕೆಯಲ್ಲಿನ ಸ್ವಾತಂತ್ರ್ಯ ಮತ್ತು ಸಮಾನತೆ ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿ ಮಹತ್ವಾಕಾಂಕ್ಷೆ ಬರಬೇಕು. ಮಾಹಿತಿ, ಮಾರ್ಗದರ್ಶನ ಸಿಕ್ಕರೆ ಇಂಥ ಹುದ್ದೆಗೆ ಹೋಗುವುದು ಕಷ್ಟವಾಗದು ಎಂದು ಅಭಿಪ್ರಾಯಪಟ್ಟರು.

ಸಾಧನೆಯ ಹಾದಿ: ಇನ್ ಸೈಟ್ಸ್ ಸಂಸ್ಥೆ

ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ದೇಶದ ಮೂರನೇ ಸಂಸ್ಥೆಯಾಗಿ ಬೆಳೆದಿದೆ. ಇದರ ಹಿಂದೆ ಸಾಕಷ್ಟು ಶ್ರಮವಿದೆ. ಯುಪಿಎಸ್ಎಸ್ಸಿ ಪರೀಕ್ಷೆಯ ಎಲ್ಲಾ ವಿಭಾಗಗಳೂ ಸೇರಿದಂತೆ ಸುಮಾರು 212 ವಿದ್ಯಾರ್ಥಿಗಳು ರ್ಯಾಂಕ್ ಬಂದಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ ವಿಚಾರ.ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ 400ರಿಂದ 500 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇಂಥ ಸಂಸ್ಥೆ ಕಟ್ಟುವುದರ ಹಿಂದೆ ಸಾಕಷ್ಟು ಶ್ರಮವಿದೆ. ಇದು ಸುಲಭವಾಗಿ ಸಿಕ್ಕಿದ್ದಲ್ಲ ಎಂದು ಹೇಳಿದರು.

ಸಾಣೇಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್ ಡಾ. ಹೆಚ್.ಎನ್. ನಾಗಮೋಹನ್ ದಾಸ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್ ಹೆಚ್. ಬಿಲ್ಲಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ನಂದೀಪುರದ ಚರಂತೇಶ್ವರ ಮಠದ ಪೂಜ್ಯ ಶ್ರೀ ಡಾ. ಮಹೇಶ್ವರ ಸ್ವಾಮೀಜಿಯವರು, ಕೂಡ್ಲಿಗಿಯ ಹಿರೇಮಠದ ಷ.ಬ್ರ. ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶಾಸಕ ಟಿ. ರಘುಮೂರ್ತಿ, ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ, ಮೋಹನ್ ಕುಮಾರ್ ಕೊಂಡಜ್ಜಿ, ಎಸ್. ಜಯಕಾಂತ್, ಜಿ. ಆರ್. ಶಿವಶಂಕರ್, ಎಲ್.ಹೆಚ್. ಅರುಣ್ ಕುಮಾರ್, ಟಿ. ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *