Home ದಾವಣಗೆರೆ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ಗೆ ಜಿ.ಬಿ. ವಿನಯ್ ಕುಮಾರ್ ಸೆಡ್ಡು: ಏ. 3ರಿಂದ ಬಿಜೆಪಿ ಅಭ್ಯರ್ಥಿ ಪರ ಹಳ್ಳಿ ಹಳ್ಳಿಗಳಲ್ಲೂ ಪಾದಯಾತ್ರೆ!
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ಗೆ ಜಿ.ಬಿ. ವಿನಯ್ ಕುಮಾರ್ ಸೆಡ್ಡು: ಏ. 3ರಿಂದ ಬಿಜೆಪಿ ಅಭ್ಯರ್ಥಿ ಪರ ಹಳ್ಳಿ ಹಳ್ಳಿಗಳಲ್ಲೂ ಪಾದಯಾತ್ರೆ!

Share
ದಾವಣಗೆರೆ
Share

ದಾವಣಗೆರೆ: ಸಂವಿಧಾನದ ಆಶಯದಂತೆ ಶೋಷಿತ ವರ್ಗದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪರನ್ನು ಗೆಲ್ಲಿಸಿಕೊಳ್ಳುವ ಕರ್ತವ್ಯ ನಮ್ಮೆಲ್ಲರದ್ದು. ಅವಕಾಶ ವಂಚಿತರ, ಶೋಷಿತರ ಧ್ವನಿಯಾಗಿರುವ ಉದ್ದೇಶ ಸ್ವಾಭಿಮಾನಿ ಬಳಗದ್ದು. ಹಾಗಾಗಿ, ಬಿಜೆಪಿ ಅಭ್ಯರ್ಥಿ ಪರವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಏಪ್ರಿಲ್ 3 ರಿಂದ ನಾಲ್ಕು ದಿನಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸಲು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ನಿರ್ಧರಿಸಿದ್ದಾರೆ.

ಕುಟುಂಬ ರಾಜಕಾರಣದ ವಿರುದ್ಧ ಜನಜಾಗೃತಿ:

ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಜಿ. ಬಿ. ವಿನಯ್ ಕುಮಾರ್ ಅವರು ಗ್ರಾಮೀಣ ಭಾಗದಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಗ್ರಾಮೀಣ ಪ್ರದೇಶದ ಜನರಿಗೆ ಕುಟುಂಬ ರಾಜಕಾರಣದ ಅಪಾಯ, ಒಂದೇ ಮನೆಗೆ ಅಧಿಕಾರ ಕೊಟ್ಟರೆ ಏನಾಗುತ್ತದೆ? ಅಹಿಂದ ಪರವಾಗಿದೆ ಎನ್ನುತ್ತಲೇ ಮೋಸ ಮಾಡುತ್ತಿರುವ ಕಾಂಗ್ರೆಸ್ ಅನ್ಯಾಯ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಜನರಿಗೆ ತಿಳಿಸಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಮತ ನೀಡುವಂತೆ ಮನವೊಲಿಸುವುದೇ ಈ ಪಾದಯಾತ್ರೆ ಪ್ರಮುಖ ಉದ್ದೇಶ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು, ಬಿಜೆಪಿ ಪಕ್ಷವು ಅಹಿಂದ ವರ್ಗದ ಸಾಮಾನ್ಯ ಕಾರ್ಯಕರ್ತ ಶ್ರೀನಿವಾಸ್ ದಾಸಕರಿಯಪ್ಪರಿಗೆ ಟಿಕೆಟ್ ನೀಡಿ ಪಕ್ಷದ ಬದ್ಧತೆ ತೋರಿಸಿದೆ. ಈ ಕಾರಣಕ್ಕಾಗಿ ಶೋಷಿತರ, ಅಹಿಂದ ಪರ ಜನರು ತೀರ್ಮಾನಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಯಲಿದೆ. ಕಾಲ್ನಡಿಗೆಯಲ್ಲಿಯೇ ತೆರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡುವುದಾಗಿ ಹೇಳಿದರು.

ಪಾದಯಾತ್ರೆ ಸಾಗುವ ಹಾದಿ:

ಏಪ್ರಿಲ್ 3ರಂದು ಶಿರಮಗೊಂಡನಹಳ್ಳಿಯಿಂದ ಪ್ರಾರಂಭವಾಗುವ ಪಾದಯಾತ್ರೆಯು ಹನುಮಂತಾಪುರ, ಹೊಸ ಬೆಳವನೂರು, ಹಳೇ ಬೆಳವನೂರು, ತುರ್ಚಘಟ್ಟ, ಚಂದ್ರನಹಳ್ಳಿ, ಬುಳ್ಳಾಪುರ, ಬುಳ್ಳಾಪುರ ಕ್ಯಾಂಪ್, ಹೊಸನಾಯಕನಹಳ್ಳಿ, ಜವಳಘಟ್ಟ, ಹದಡಿ, ಕೈದಾಳೆ, ಕೈದಾಳೆ ಕ್ಯಾಂಪ್, ಗಿರಿಯಾಪುರ, ಕುಕ್ಕುವಾಡ, ಹೊಸ ಕೊಳೇನಹಳ್ಳಿ, ಹಳೇ ಕೊಳೇನಹಳ್ಳಿ, ನಾಗರಸನಹಳ್ಳಿ, ಜಡಗನಹಳ್ಳಿ, ಬಲ್ಲೂರು ಹೊಸ ಬಡಾವಣೆ, ಬಲ್ಲೂರು, ಶಿರಗಾನಹಳ್ಳಿ, ಕನಗೊಂಡನಹಳ್ಳಿ, ಬಟ್ಟಲಕಟ್ಟೆ, ವರೇಡಹಳ್ಳಿ, ಮುದಹದಡಿ, ಜರೇಕಟ್ಟೆ, ದುರ್ಗಾಂಬಿಕಾ ಕ್ಯಾಂಪ್, ಹೊಸ ಬಿಸಲೇರಿ, ಹಳೇ ಬಿಸಲೇರಿ, ಆರನೇ ಕಲ್ಲು, ಮಹಾದೇವಿಪುರ, ನಾಗನೂರಿನಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ:

2024ರ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ. ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾವಣಗೆರೆಗೆ ಆಗಮಿಸಿ ಎರಡು ದಿನಗಳ ಕಾಲ ನನ್ನ ವಿರುದ್ಧ ಪ್ರಚಾರ ನಡೆಸಿದರು. ನನಗೆ ಒಂದೇ ಒಂದು ಮತ ಹಾಕಬಾರದೆಂದು ನನ್ನ ವಿರುದ್ಧ ಹೇಳಿಕೆ ನೀಡಿದರು. ಆದರೂ ದಾವಣಗೆರೆ ಜಿಲ್ಲೆಯ ಜನರು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.

ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡಬಾರದು ಎಂಬ ಕಾರಣಕ್ಕೆ ಸ್ವಾಭಿಮಾನಿ ಬಳಗದ ಮೂಲಕ ರಾಜ್ಯಾದ್ಯಂತ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳು, ಆಶಯಗಳನ್ನು ತಿಳಿಸಿಕೊಡುವ ಪ್ರಯತ್ನ ಮುಂದುವರಿಸಿದ್ದೇನೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಸಚಿವ ಶಿವನಗೌಡ ನಾಯಕ್, ಬಿಜೆಪಿ ನಾಯಕ ಕೊಳೇನಹಳ್ಳಿ ಸತೀಶ್, ಶರತ್, ಹೇಮಂತ್, ನಿಜಲಿಂಗಪ್ಪ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *