Site icon Kannada News-suddikshana

ಬಿ. ಎಸ್. ಯಡಿಯೂರಪ್ಪ ಅಧಿಕಾರಕ್ಕೇರಲು ಸಹಾಯ ಮಾಡಿದ್ದೇಗೆಂದು ಎಳೆ ಎಳೆಯಾಗಿ ಬಿಚ್ಚಿಟ್ಟ ಜಿ.ಎಂ. ಸಿದ್ದೇಶ್ವರ !

ಜಿ.ಎಂ. ಸಿದ್ದೇಶ್ವರ

SUDDIKSHANA KANNADA NEWS/ DAVANAGERE/ DATE_08-07_2025

ದಾವಣಗೆರೆ: ಬಿ. ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾಗಲು ಹಾಗೂ ಸಿಎಂ ಆಗಲು ಯಾವ ರೀತಿ ಸಹಾಯ ಮಾಡಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ  ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: ಯಡಿಯೂರಪ್ಪರಿಂದ 1 ಸಾವಿರ ರೂಪಾಯಿ ಸ್ವಂತಕ್ಕೆ ಕೆಲಸ ಮಾಡಿಸಿಕೊಂಡಿದ್ದರೆ ರಾಜಕೀಯ ನಿವೃತ್ತಿ: ಸಿಡಿದೆದ್ದ ಜಿ.ಎಂ. ಸಿದ್ದೇಶ್ವರ!

ನಗರದ ಅಭಿನವ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ನಮ್ಮಾಭಿಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಪಕ್ಷಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂದೆಲ್ಲಾ ಕೆಲವರು ಪ್ರಶ್ನಿಸತೊಡಗಿದ್ದಾರೆ. ನಾನೇನು ಮಾಡಿದ್ದೇನೆಂದು ಬಿ. ಎಸ್. ಯಡಿಯೂರಪ್ಪ ಅವರಿಗೆ ಗೊತ್ತಿದೆ ಎಂದು ಹೇಳಿದರು.

ನೀವು ಉಪಮುಖ್ಯಮಂತ್ರಿಯಾಗಿ, ಹೆಚ್. ಡಿ. ಕುಮಾರಸ್ವಾಮಿ ಅವರು ಸಿಎಂ ಆಗಲು ಸಿದ್ದರಿದ್ದಾರೆಂದು ಮೊದಲು ಯಡಿಯೂರಪ್ಪರಿಗೆ ಹೇಳಿದ್ದೇ ನಾನು. ಆಗ ಯಡಿಯೂರಪ್ಪನವರು 78 ಸ್ಥಾನಗಳು ಬಿಜೆಪಿ ಇದ್ದು, ಸಿಎಂ ಆಗಬೇಕೆಂದು ಹೇಳಿದ್ದರು. ಆಮೇಲೆ 2006ರಲ್ಲಿ ಯಡಿಯೂರಪ್ಪನವರೇ ಫೋನ್ ಮಾಡಿ ಶಿಕಾರಿಪುರಕ್ಕೆ ಕರೆಸಿಕೊಂಡರು. ನಾನೊಬ್ಬನೇ ಚಾಲಕನನ್ನು ಕರೆದುಕೊಂಡು ಕಾರಿನಲ್ಲಿ ಹೋದೆ. ಆಗ ಸಿ. ಎಂ. ಉದಾಸಿ, ಯಡಿಯೂರಪ್ಪನವರು ವಾಕ್ ಮಾಡುತ್ತಿದ್ದರು. ನೀವು ಉಪಮುಖ್ಯಮಂತ್ರಿಯಾಗಲು ತಯಾರಿದ್ದರೆ, ಕುಮಾರಸ್ವಾಮಿ ಅವರು ಸಿಎಂ ಆಗಲು ರೆಡಿ ಇದ್ದಾರೆ ಎಂದು ಹೇಳಿದೆ. ಫೋನ್ ನಲ್ಲೇ ಮಾತನಾಡಿ ಎಂದರು. ಆಗ ಕುಮಾರಸ್ವಾಮಿ ಜೊತೆ ಮಾತನಾಡಿದೆ. ಯಡಿಯೂರಪ್ಪ ಒಪ್ಪಬೇಕಲ್ವಾ ಎಂದು ಹೆಚ್ ಡಿಕೆ ಕೇಳಿದ್ರು. ಪಕ್ಷ ಕಟ್ಟಿದ ವಿಚಾರದಲ್ಲಿ ಮಾತನಾಡಲೇಬೇಕು. ಅನಿವಾರ್ಯವಾಗಿ ಮಾತನಾಡುತ್ತಿದ್ದೇನೆ. ಆಗ ನಾನು ಏನು ಪಾತ್ರ ವಹಿಸಿದ್ದೆ ಎಂಬುದು ಸಿ. ಎಂ. ಉದಾಸಿ, ಯಡಿಯೂರಪ್ಪರಿಗೆ ಗೊತ್ತಿದೆ ಎಂದರು.

ಕುಮಾರಸ್ವಾಮಿ ಅವರು ಸಿ. ಎಂ. ಉದಾಸಿ, ಯಡಿಯೂರಪ್ಪರಿಗೆ ಬನ್ನಿ ಎಂದರು. ನಾನು ಉದಾಸಿ ಮನೆಗೆ ಹೋಗಿದ್ದಕ್ಕೆ ಸಿ. ಎಂ. ಉದಾಸಿ ಪುತ್ರ ಶಿವಕುಮಾರ್ ಉದಾಸಿಯೇ ಸಾಕ್ಷಿ. ಉದಾಸಿ ಅವರೇ ಅವರ ಪುತ್ರನಿಗೆ ಹೇಳಿದ್ದರು. ಕುಮಾರಣ್ಣ ಮುಖ್ಯಮಂತ್ರಿಯಾದರು. ಯಡಿಯೂರಪ್ಪ ಡಿಸಿಎಂ ಆದರು. ಅಧಿಕಾರ ಬಿಟ್ಟುಕೊಡುವಾಗ ಸ್ವಲ್ಪ ಯಡವಟ್ಟಾಗುತ್ತಿದೆ ಎಂದಾಗ ವಚನಭ್ರಷ್ಟತೆ ಆಯಿತು. ಆಗ ರಾಜ್ಯಾದ್ಯಂತ ಯಡಿಯೂರಪ್ಪರ ಪರ ಮಾಧ್ಯಮಗಳು, ಜನರು ಹಾಗೂ ಎಲ್ಲಾ ಸಮಾಜದವರು ಅನುಕಂಪ ತೋರಿದರು. ಚುನಾವಣೆಗೆ ನಡೆದಾಗ ಬಿಜೆಪಿಗೆ ಬಂದದ್ದು 110 ಸ್ಥಾನಗಳು. ಆಗಲೂ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿಲ್ಲ. ಆಗ ನಾಲ್ವರು ಪಕ್ಷೇತರರು ಗೆದ್ದಿದ್ದರು. ಅನಂತಕುಮಾರ್ ಅವರು ಕರೆ ಮಾಡಿ ಅವರನ್ನು ಕರೆದುಕೊಂಡು ಬನ್ನಿ ಎಂದರು. ವೆಂಕಯ್ಯನಾಯ್ಡು, ಅನಂತಕುಮಾರ್, ಯಡಿಯೂರಪ್ಪ ಅವರು ನನ್ನ ಜೊತೆ ಮಾತನಾಡಿದರು. ಬೆಳಿಗ್ಗೆ ಮೂವರನ್ನು ಕರೆದುಕೊಂಡು ಹೋದೆ. ಆಮೇಲೆ ಸರ್ಕಾರ ರಚನೆಯಾಯ್ತು. ನನ್ನದೂ ಕೊಡುಗೆ ಇದೆ. ಇದನ್ನು ಮರೆಯಲು ಆಗುತ್ತದೆಯಾ ಎಂದು ಜಿ. ಎಂ. ಸಿದ್ದೇಶ್ವರ ಪ್ರಶ್ನಿಸಿದರು.

ಸಂಸದ ಗೋವಿಂದ ಕಾರಜೋಳ, ಶಾಸಕ ಬಿ. ಪಿ. ಹರೀಶ್, ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ, ಹೆಚ್. ಎಸ್. ಶಿವಶಂಕರ್, ಅರವಿಂದ ಲಿಂಬಾವಳಿ, ಎಸ್. ವಿ. ರಾಮಚಂದ್ರ, ಹೆಚ್. ಪಿ. ರಾಜೇಶ್, ಜಿ. ಎಸ್. ಅನಿತ್ ಕುಮಾರ್, ಬಿ. ವಿ. ನಾಯಕ್, ವೀರೇಶ್ ಹನಗವಾಡಿ, ಶಾಂತರಾಜ್ ಪಾಟೀಲ್, ಜೀವನ್ ಮೂರ್ತಿ, ದೂಡಾ ಮಾಜಿ ಅಧ್ಯಕ್ಷರಾದ ಎ. ವೈ. ಪ್ರಕಾಶ್, ದೇವರಮನಿ ಶಿವಕುಮಾರ್, ಹಿರಿಯ ಮುಖಂಡ ಮುರುಗೇಶ್ ಆರಾಧ್ಯ, ಬಿಜೆಪಿಯ ಗುಲ್ಬರ್ಗಾ ಭಾಗದ ಮುಖಂಡ ರವಿ ಬಿರಾದಾರ್, ಹೊನ್ನಾಳಿ ಕ್ಷೇತ್ರದ ಎ. ಬಿ. ಹನುಮಂತಪ್ಪ, ಎಂ. ಆರ್. ಮಹೇಶ್, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಸಂಗನಗೌಡರು, ಅಜಿತ್ ಸಾವಂತ್, ಲಿಂಗರಾಜ್, ಸೊಕ್ಕೆ ನಾಗರಾಜ್, ಹನುಮಂತ್ ನಾಯ್ಕ್, ದೇವೇಂದ್ರಪ್ಪ, ಹಾಲೇಶ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ. ಎಸ್. ಶ್ಯಾಮ್, ಜಯಮ್ಮ, ಸಿ. ಆರ್. ನಾಸೀರ್ ಅಹ್ಮದ್, ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಜಿ. ಪಂ., ತಾ.ಪಂ., ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಹಾಜರಿದ್ದರು.

Exit mobile version