SUDDIKSHANA KANNADA NEWS/DAVANAGERE/DATE:23_12_2025
ಕಣ್ಣೂರು: ಕೇರಳದ ಕಣ್ಣೂರಿನಲ್ಲಿರುವ ತಮ್ಮ ನಿವಾಸದಲ್ಲಿ ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತರನ್ನು 36 ವರ್ಷದ ಕಲಾಧರನ್, ಅವರ ತಾಯಿ 56 ವರ್ಷದ ಉಷಾ ಮತ್ತು ಕಲಾಧರನ್ ಅವರ ಮಕ್ಕಳಾದ ಆರು ವರ್ಷದ ಹಿಮಾ ಮತ್ತು ಎರಡು ವರ್ಷದ ಕಣ್ಣನ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಉಷಾ ಮತ್ತು ಕಲಾಧರನ್ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಕ್ಕಳು ನೆಲದ ಮೇಲೆ ಸತ್ತಿರುವುದು ಪತ್ತೆಯಾಗಿದೆ. ಮಕ್ಕಳಿಗೆ ವಿಷ ಕುಡಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಪ್ರಾಥಮಿಕ ಮಾಹಿತಿಯಿಂದ ಲಭಿಸಿದೆ.
ಕಲಾಧರನ್ ಮತ್ತು ಅವರ ಪತ್ನಿ ನಡುವೆ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದು, ಇತ್ತೀಚೆಗೆ ಮಕ್ಕಳನ್ನು ತಾಯಿಗೆ ಹಸ್ತಾಂತರಿಸುವಂತೆ ಆದೇಶಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಂತರ, ಪತ್ನಿಯ ಕುಟುಂಬವು ಮಕ್ಕಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಪೊಲೀಸರಿಗೆ ದೂರು ನೀಡಿತ್ತು.
ಪಯ್ಯನ್ನೂರು ಪಟ್ಟಣದ ಆಟೋ ಚಾಲಕ ಉಷಾ ಅವರ ಪತಿ ಎ.ಕೆ. ಉನ್ನಿಕೃಷ್ಣನ್ ಅವರು ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂತಿರುಗಿದಾಗ ಮನೆ ಲಾಕ್ ಆಗಿರುವುದನ್ನು ಕಂಡರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಪದೇ ಪದೇ ಕರೆ ಮಾಡಿದರೂ ಉತ್ತರಿಸಿಲ್ಲ. ಇದರಿಂದ ಆಘಾತಗೊಂಡು ನಂತರ, ಅವರು ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ. ಡೆತ್ ನೋಟ್ ಅನ್ನು ಪೊಲೀಸರಿಗೆ ಕೊಟ್ಟಿದ್ದಾರೆ. ಪೊಲೀಸರು ಬಂದ ನಂತರವೇ ಬಾಗಿಲು ತೆಗೆಯಲಾಗಿದೆ.
ನ್ಯಾಯಾಲಯದ ನಿರ್ದೇಶನದಂತೆ ಸೋಮವಾರ ಮಕ್ಕಳನ್ನು ಬಿಡುಗಡೆ ಮಾಡುವಂತೆ ಸೂಚಿಸಿ, ರಾತ್ರಿ ಉನ್ನಿಕೃಷ್ಣನ್ ಅವರಿಗೆ ಕರೆ ಮಾಡಿರುವುದಾಗಿ ಪೊಲೀಸರು ದೃಢಪಡಿಸಿದರು. ಕಣ್ಣೂರು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಅನುಜ್ ಪಲಿವಾಲ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ.





Leave a comment