Site icon Kannada News-suddikshana

ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ: ಮುಂಗಾರು ಹಂಗಾಮಿನ ಬೆಳೆ ವಿಮಾ ನೋಂದಣಿಗೆ ಅರ್ಜಿ

SUDDIKSHANA KANNADA NEWS/ DAVANAGERE/ DATE-17-06-2025

ಬೆಂಗಳೂರು: 2025-26 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಮುಂಗಾರು ಹಂಗಾಮಿನ ಬೆಳೆ ವಿಮಾ ನೋಂದಣಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮುಂಗಾರು ಹಂಗಾಮಿಗೆ ಆಯ್ದ ಹೋಬಳಿಗಳಲ್ಲಿ ಮಳೆ ಆಶ್ರಿತ ಬೆಳೆಗಳಾದ ರಾಗಿ, ಜೋಳ ಹಾಗೂ ಪಂಚಾಯಿತಿ ಮಟ್ಟದಲ್ಲಿ ನೀರಾವರಿ/ಮಳೆ ಆಶ್ರಿತ ಬೆಳೆಗಳಾದ ಭತ್ತ, ಮುಸುಕಿನ ಜೋಳ ಬೆಳೆಗಳು ಆಯ್ಕೆ ಆಗಿದ್ದು, ಜಿಲ್ಲೆಯಲ್ಲಿ ಬೆಳೆ ವಿಮಾ ಯೋಜನೆಯನ್ನು ಸರ್ಕಾರದಿಂದ ಆಯ್ಕೆಯಾದ ಓರಿಯೆಂಟಲ್ ಜನರಲ್ ಇನ್‌ಶ್ಯೂರೆನ್ಸ್ ಕಂಪನಿಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುವುದು.

ವಿಮಾ ಬೆಳೆ ನೋಂದಣಿ ಮಾಡಿಕೊಳ್ಳಲು ಜು.31 (ಮುಸುಕಿನ ಜೋಳ) ಹಾಗೂ ಆ.16 (ಭತ್ತ, ಜೋಳ,ರಾಗಿ) ಕೊನೆಯ ದಿನಾಂಕವಾಗಿದೆ. ಬಿತ್ತನೆ/ನಾಟಿ ಮಾಡುವುದಕ್ಕಿಂತ ಮುಂಚಿತವಾಗಿಯೇ ನೋಂದಾಯಿಸಲು ಅವಕಾಶವಿದ್ದು, ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣೆ ಮತ್ತು ಆಧಾರ್ ಸಂಖ್ಯೆ ಸಹಿತ ತಮಗೆ ಹತ್ತಿರವಿರುವ ಬ್ಯಾಂಕ್/ಆರ್ಥಿಕ ಸಂಸ್ಥೆಗಳು/ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ (ಸಿಎಸ್‌ಸಿ ಕೇಂದ್ರಗಳು) ನೋಂದಾಯಿಸಿಕೊಳ್ಳಬಹುದು.

ಬೆಳೆ ಸಾಲ ಪಡೆಯುವ ರೈತರನ್ನು ಬೆಳೆ ವಿಮಾ ಯೋಜನೆಯಡಿ ಕಡ್ಡಾಯವಾಗಿ ಒಳಪಡಿಸಲಾಗುವುದು. ತದ ನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೇ ಇದಲ್ಲಿ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕೆ 7 ದಿನಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮಾ ಯೋಜನೆಯಿಂದ ಕೈಬಿಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಸಮೀಪವಿರುವ ಬ್ಯಾಂಕ್ ಅಧಿಕಾರಿಗಳನ್ನು ಅಥವಾ http://samrkshane.karnataka.gov.in ವೆಬ್ ಸೈಟ್ ನಲ್ಲಿ ಮಾಹಿತಿ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Exit mobile version